ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024-25ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ವಿಶ್ರಾಂತ ಕುಲಪತಿ, ಜಾನಪದ ಹಿರಿಯ ವಿದ್ವಾಂಸ, ಚಿಂತಕ ಡಾ. ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಕುಂ.ವೀರಭದ್ರಪ್ಪ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಡಾ. ಬಿ.ಎ. ವಿವೇಕ ರೈ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐದು ಲಕ್ಷ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.ಕನ್ನಡದ ಖ್ಯಾತ ಸಂಶೋಧಕರಾಗಿರುವ ಡಾ. ಬಿ.ಎ. ವಿವೇಕ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಅಗ್ರಾಳದವರು. ಸಾಹಿತ್ಯ ಕ್ಷೇತ್ರದ ವಿಮರ್ಶಕರು, ಅನುವಾದಕರು, ಸಾಂಸ್ಕೃತಿಕ ಚಿಂತಕರು ಹಾಗೂ ಜಾನಪದ ವಿದ್ವಾಂಸರಾದ ಇವರು ಕಳೆದ 54 ವರ್ಷಗಳಿಂದ ಅಧ್ಯಾಪನ, ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ-ತುಳು ಭಾಷೆಯ ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸುವ ಮೂಲಕ ಆ ಭಾಷೆಗಳ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರಾಗಿ ಖ್ಯಾತರಾಗಿದ್ದಾರೆ.ಸುಮಾರು 12 ಕ್ಕೂ ಹೆಚ್ಚು ಮಹತ್ವದ ಕೃತಿಗಳು, ಕಾದಂಬರಿಗಳು, ಹಲವಾರು ಕೃತಿಗಳ ಸಂಪಾದನೆ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚನೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ಹೀಗೆ ವಿಪುಲವಾದ ಸಾಹಿತ್ಯ ಸೇವೆ ಮಾಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಜರ್ಮನಿಯ ವ್ಯೂತ್ ಬರ್ಗ್ ವಿಶ್ವವಿದ್ಯಾನಿಲಯದ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ, ಸಂಮಾನಗಳು ಲಭಿಸಿವೆ.ಬಂಟ್ವಾಳ ತಾಲೂಕಿನ ಪುಣಚ ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಒಂದರಿಂದ ಎಂಟನೆಯ ತರಗತಿವರೆಗೆ ಅಭ್ಯಾಸ ಮಾಡಿ, ಬಳಿಕ ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಹತ್ತನೆಯ ತರಗತಿವರೆಗೆ ಕಲಿತರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಿ.ಎಸ್ಸಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿಯನ್ನು ಮೊದಲ ಸ್ಥಾನದೊಂದಿಗೆ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ ಪಡೆದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸದಸ್ಯರಾಗಿ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್‌ನ ಸದಸ್ಯರಾಗಿ, ಮಂಗಳೂರು ದರ್ಶನ ಸಂಪುಟದ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಕನಕದಾಸ ಅಧ್ಯಯನ ಕೇಂದ್ರ, ಮಾಹೆ ( ಮಣಿಪಾಲ ವಿಶ್ವವಿದ್ಯಾಲಯ) ಇದರ ಸಲಹಾ ಸಮಿತಿ ಅಧ್ಯಕ್ಷರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಕ ನಿರ್ದೇಶಕ, ಪ್ರಸಾರಾಂಗ, ಎಸ್‌ಡಿಎಂ ತುಳು ಪೀಠದ ಸ್ಥಾಪಕ ಸಂಯೋಜಕ, ಡಾ.ಶಿವರಾಮಕಾರಂತ ಪೀಠದ ಸ್ಥಾಪಕ ನಿರ್ದೇಶಕರಾಗಿದ್ದರು. Follklore Society of South Indian Languages (FOSSILS),Trivandrum, Folklore Fellows,Finland, ಮಂಗಳೂರು ದರ್ಶನ: ೩ ಸಂಪುಟಗಳು ಹಾಗೂ ವಚನ (ಶಿವಶರಣರ ೨೫೦೦ ವಚನಗಳ ತುಳು ಅನುವಾದ) ಇದರ ಸಂಪಾದಕರಾಗಿದ್ದರು.