ಬಿಗ್‌ಬಾಸ್‌ ಶೋ ನಿಲ್ಲಿಸಿ: ಮಾಲಿನ್ಯ ಮಂಡಳಿ ಶಾಕ್‌

| Published : Oct 07 2025, 01:02 AM IST

ಸಾರಾಂಶ

ಕೊಳಚೆ ನೀರನ್ನು ಸಂಸ್ಕರಿಸದೆ ಹಾಗೆಯೇ ಮೋರಿಗೆ ಹರಿಬಿಡುತ್ತಿರುವ ಜನಪ್ರಿಯ ಟಿವಿ ಶೋ ‘ಬಿಗ್ ಬಾಸ್’ ಶೂಟಿಂಗ್ ನಡೆಯುವ ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೇನ್ಮೆಂಟ್ ಪ್ರೈ. ಲಿಮಿಟೆಡ್‌ (ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್) ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಳಚೆ ನೀರನ್ನು ಸಂಸ್ಕರಿಸದೆ ಹಾಗೆಯೇ ಮೋರಿಗೆ ಹರಿಬಿಡುತ್ತಿರುವ ಜನಪ್ರಿಯ ಟಿವಿ ಶೋ ‘ಬಿಗ್ ಬಾಸ್’ ಶೂಟಿಂಗ್ ನಡೆಯುವ ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೇನ್ಮೆಂಟ್ ಪ್ರೈ. ಲಿಮಿಟೆಡ್‌ (ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್) ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ನೋಟಿಸ್ ಜಾರಿ ಮಾಡಿದೆ.

ನಟ ಸುದೀಪ್ ನಡೆಸಿಕೊಡುವ ಮನೋರಂಜನಾ ಕಾರ್ಯಕ್ರಮ ಬಿಗ್‌ ಬಾಸ್ ಶೂಟಿಂಗ್ ಸೆಟ್ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.

ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆ ಮಾಡಿರುವ ಕಾರಣ ವೆಲ್ಸ್ ಸ್ಟುಡಿಯೋಸ್‌ನವರು ತಮ್ಮ ಕಾರ್ಯಾಚರಣೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು. ರಾಮನಗರ ಜಿಲ್ಲಾಧಿಕಾರಿಯವರು ಈ ಯುನಿಟ್ ಅನ್ನು ಜಪ್ತಿ ಮಾಡಬೇಕು. ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಹಸಿರು ವಲಯದಲ್ಲಿ ಬರುವ ಸ್ಟುಡಿಯೋದಲ್ಲಿ ಜಲ ಸಂರಕ್ಷಣೆ ಕಾಯ್ದೆಗಳ ಪಾಲನೆ ಕುರಿತು ರಾಮನಗರದ ಅಧಿಕಾರಿಗಳು 2024ರ ಮಾ.19 ಹಾಗೂ ಜೂ.11ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆಗೆ ಮಂಡಳಿಯಿಂದ ಯಾವುದೇ ಒಪ್ಪಿಗೆ ಪಡೆಯದಿರುವುದು ಕಂಡು ಬಂದಿದೆ. ಅಮ್ಯೂಸ್‌ಮೆಂಟ್ ಪಾರ್ಕಿನಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಸಂಸ್ಕರಿಸಿದರೆ ಹೊರಗೆ ಬಿಡಲಾಗುತ್ತಿದ್ದು, ಇದರಿಂದ ಸುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಪಾರ್ಕಿನಲ್ಲಿ 250 ಕೆಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಯನ್ನು ಸ್ಥಾಪಿಸಲಾಗಿದೆಯಾದರೂ ಬಳಕೆಯಾಗದೆ ಖಾಲಿ ಬಿದ್ದಿದೆ. ಇನ್ನು ಪಾರ್ಕಿನಲ್ಲಿ ಉತ್ಪತ್ತಿಯಾಗುವ ಕಪ್, ಪ್ಲೇಟ್, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಘನತ್ಯಾಜ್ಯವನ್ನು ಪ್ರತ್ಯೇಕಗೊಳಿಸದೆ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ. ಎಸ್‌ಟಿಪಿ ಪ್ರದೇಶದ ನಿರ್ವಹಣೆಯೂ ಇಲ್ಲ. ಹೀಗಾಗಿ, ಜಲ ಸಂರಕ್ಷಣೆ ಕಾಯ್ದೆ ಮತ್ತು ನಿಯಮಗಳ ಪಾಲನೆಯಾಗಿರುವ ಕುರಿತು ಮಂಡಳಿಯಿಂದ ಒಪ್ಪಿಗೆ ಪಡೆದುಕೊಳ್ಳುವರೆಗೆ, ಮುಂದಿನ ಆದೇಶದವರೆಗೆ ಸ್ಟುಡಿಯೋವನ್ನು ಬಂದ್ ಮಾಡುವಂತೆ ನೋಟಿಸ್‌ನಲ್ಲಿ ಮಂಡಳಿ ತಿಳಿಸಿದೆ.