ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಕೆಮ್ಮು, ಶೀತದ ಸಿರಪ್‌ನಿಂದ ಮಕ್ಕಳಲ್ಲಿ ಗಂಭೀರ ಅನಾರೋಗ್ಯ ಹಾಗೂ ಸಾವು ವರದಿ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೆಮ್ಮು ಸಿರಪ್ ಸುರಕ್ಷಿತ ಬಳಕೆ ಕುರಿತು ಆರೋಗ್ಯ ಇಲಾಖೆ ಸಲಹಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಿರಪ್ ನೀಡದಂತೆ ಎಚ್ಚರಿಸಿದೆ.ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು, ಆರೈಕೆದಾರರು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು. 2 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಔಷಧ ನೀಡಬೇಕು. ಇನ್ನು ಹಿರಿಯ ಮಕ್ಕಳಿಗೆ ಕೆಮ್ಮಿನ ಸಿರಪ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಅನ್ನು ಬಳಸಬೇಕು. ಬಹು ಔಷಧಗಳ ಸಂಯೋಜನ ಇರುವ ಸಿರಪ್ ಉಪಯೋಗಿಸಬಾರದು ಎಂದು ಸಲಹೆ ನೀಡಲಾಗಿದೆ.ನಿದ್ರೆ, ವಿಶ್ರಾಂತಿ ಮುಖ್ಯ:
ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೆಮ್ಮು ಮತ್ತು ಶೀತವು ಸೌಮ್ಯವಾಗಿರುತ್ತದೆ. ಸುರಕ್ಷಿತವಾದ ಕ್ರಮಗಳಿಂದ ನಿಧಾನವಾಗಿ ಗುಣವಾಗುತ್ತದೆ. ಹೀಗಾಗಿ ಸಾಕಷ್ಟು ದ್ರವಪದಾರ್ಥ ನೀಡುವುದು, ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಲು ಅವಕಾಶ ನೀಡುವುದು, ಪೌಷ್ಟಿಕ ಆಹಾರವನ್ನು ನೀಡುವುದು ಉತ್ತಮ ಎಂದು ಇಲಾಖೆ ತಿಳಿಸಿದೆ.ಸ್ವಯಂ ಔಷಧೋಪಚಾರ ಮಾಡಬೇಡಿ:ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್ ಎಂದಿಗೂ ಖರೀದಿಸಬೇಡಿ ಅಥವಾ ಬಳಸಬೇಡಿ. ಈ ಹಿಂದೆ ಬಳಸಿ ಉಳಿದ ಔಷಧ ಅಥವಾ ಇತರರು ಶಿಫಾರಸು ಮಾಡಿದ ಔಷಧ ಬಳಸಬೇಡಿ. ಔಷಧಗಳ ಬಳಕೆಗೆ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಿ, ಲೇಬಲ್ ಓದಿ ಸೂಚನೆ ಪಾಲಿಸಬೇಕು ಎಂದು ಹೇಳಿದೆ.
ಬಾಕ್ಸ್..ಈ ಲಕ್ಷಣ ಇದ್ದರೆ ತಕ್ಷಣ
ವೈದ್ಯರ ಬಳಿಗೆ ಹೋಗಿಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಉಂಟಾದರೆ ತಕ್ಷಣ ಹತ್ತಿರದ ತಜ್ಞ ವೈದ್ಯರನ್ನು ಭೇಟಿ ಮಾಡಿ. ಉಸಿರಾಟದ ತೊಂದರೆ ಅಥವಾ ವೇಗದ ಉಸಿರಾಟ, ನಿರಂತರ ಅಥವಾ ಉಲ್ಬಣಗೊಳ್ಳುತ್ತಿರುವ ಕೆಮ್ಮು, ಅತಿಯಾದ ಜ್ವರ ಅಥವಾ ಆಹಾರ ತಿರಸ್ಕರಿಸುವುದು, ನಿದ್ರಾ ಸ್ಥಿತಿ ಅಥವಾ ಪ್ರಜ್ಞಾ ಹೀನ ಸ್ಥಿತಿ ಉಂಟಾದರೆ ತಕ್ಷಣ ವೈದ್ಯರನ್ನು ಕಾಣಬೇಕು.