ಕೊಪ್ಪಳ: ಮಕ್ಕಳನ್ನು ಮತ್ತೊಂದು ಮಗುವಿನ ಜೊತೆ ಹೋಲಿಕೆ ಮಾಡುವುದನ್ನು ಬಿಡಿ. ಆ ಮಗುವಿನಲ್ಲಿಯೇ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಪಾಲಕರಿಗೆ ಸಲಹೆ ನೀಡಿದರು.

ನಗರದ ಎಜುಕೇರ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಕಲಿಕಾ ಸಾಮರ್ಥ್ಯವಿರುತ್ತದೆ. ಅವರ ಕಲಿಕಾ ಸಾಮರ್ಥ್ಯ- ನ್ಯೂನತೆ ಗಮನಿಸಿ ಅವರ ಬೌದ್ಧಿಕ ಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಕ್ಕೆ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ, ಮಾನಸಿಕವಾಗಿ ಮಕ್ಕಳಲ್ಲಿ ಗಟ್ಟಿತನ ಬೆಳೆಸುವ ಕೆಲಸವಾಗಬೇಕಿದೆ ಎಂದರು.

ಕಳೆದೊಂದು ದಶಕದಿಂದ ಮಕ್ಕಳಲ್ಲಿ ಜ್ಞಾನದ ಹಸಿವು ನೀಗಿಸುತ್ತಿರುವ ಎಜ್ಯುಕೇರ್ ಇಂಗ್ಲೀಷ್ ಮಿಡಿಯಂ ಶಾಲೆಯ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ನಾನೂ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಿದ್ದೇನೆ. ಐಪಿಎಸ್ ಆದ ಬಳಿಕ ರಾಮಕೃಷ್ಣ ಆಶ್ರಮದ ಶಾಲೆಯ ಹೆಸರನ್ನು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಅದೇ ರೀತಿ ಈ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ ಉತ್ತಮ ಭವಿಷ್ಯ ಕಂಡುಕೊಂಡ ಬಳಿಕ ಈ ಶಾಲೆಯ ಹೆಸರನ್ನು ಚಿರಸ್ಥಾಯಿಯಾಗಿಸುತ್ತಾರೆ. ಹೀಗಾಗಿ, ಮಕ್ಕಳ ಜೀವನದಲ್ಲಿ ಶಿಕ್ಷಣ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ ಎಂದರು.


ಮಿಮಿಕ್ರಿ

ಕಲಾವಿದ ಅನಂತ ದೇಶಪಾಂಡೆ ಅವರು, ಹಿರಿಯ ಕವಿ ದಿ. ದ.ರಾ. ಬೇಂದ್ರೆಯವರಂತೆ ಮಾಡಿದ ಮಿಮಿಕ್ರಿ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸಿತು. ಥೇಟ್ ದ.ರಾ. ಬೇಂದ್ರೆಯವರಂತೆ ವೇಷ ಧರಿಸಿದ್ದ ಅನಂತ ದೇಶಪಾಂಡೆ ಅವರನ್ನು ನೋಡಿ, ವಿದ್ಯಾರ್ಥಿಗಳು, ಪಾಲಕರು ಸೇರಿ ನೆರೆದವರು ಕಾರ್ಯಕ್ರಮದಲ್ಲಿ ಮೊದಲಿಗೆ ಒಂದು ಕ್ಷಣ ಅವಕ್ಕಾಗಿದ್ದರು. ಬಳಿಕ ವೇದಿಕೆಯ ಮೇಲೆ ಅವರ ಮಿಮಿಕ್ರಿ ಎಲ್ಲರ ಮನಸೊರೆಗೊಂಡಿತು. ಬೇಂದ್ರೆಯವರ ನಿ ಹಿಂಗ್ ನೋಡಬೇಡ ನನ್ನಾ ಅವರ ಗೀತೆ ಸೇರಿದಂತೆ ವಿವಿಧ ಕವಿತೆಗಳನ್ನು ವಾಚನ ಮಾಡಿ, ಗಮನ ಸೆಳೆದರು.

ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ್, ಎಜ್ಯುಕೇರ್ ಇಂಗ್ಲಿಷ್ ಮಿಡಿಯಂ ಶಾಲೆಯ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ ಸೇರಿ ಇನ್ನಿತರರು ಇದ್ದರು.