ಪರೀಕ್ಷಾ ಎಡವಟ್ಟು ನಿಲ್ಲಿಸಿ: ಎಂಎಲ್ಸಿ ಒತ್ತಾಯ

| Published : Mar 23 2024, 01:07 AM IST

ಸಾರಾಂಶ

ಎಸ್ಸೆಸ್ಸೆಲ್ಸಿ, ಪಿಯುಸಿ ಮೂರು ಪರೀಕ್ಷೆ ಅಂತಾರೆ ಇದರ ಸಾಧಕಬಾಧಕಗಳ ಕುರಿತು ಕನಿಷ್ಟ ಚರ್ಚೆಯನ್ನೂ ನಡೆಸಿಲ್ಲ. ಇದೇ ಎಡವಟ್ಟುಗಳು ಮುಂದುವರೆದರೆ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಬೇಕಾದೀತು ಎಂದು ಎಮಎಲ್ಸಿ ಡಾ.ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಪಿಯುಸಿ, ಪದವಿ ಪರಿಕ್ಷೆಗಳಿಗಿಲ್ಲದ ವೆಬ್‌ಕಾಸ್ಟಿಂಗ್ ಎಸ್ಸೆಸ್ಸೆಲ್ಸಿ ಮಕ್ಕಳಿಗೇಕೆ. ಈಗಾಗಲೇ ಮಕ್ಕಳ ಬದುಕಿನೊಂದಿಗೆ ಸಾಕಷ್ಟು ಚೆಲ್ಲಾಟವಾಡಿದ್ದೀರಿ, ೫, ೮ ಮತ್ತು ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೇ ಗೊಂದಲ ಸೃಷ್ಟಿಸಿದ್ದೀರಿ, ದಿನಕ್ಕೊಂದು ಆದೇಶ ಮಾಡಿ ತಪ್ಪು ಮಾಡುತ್ತಿದ್ದೀರಿ, ನಿಮ್ಮ ಎಡವಟ್ಟುಗಳನ್ನು ನಿಲ್ಲಿಸಿ ಎಂದು ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ ಮೂರು ಪರೀಕ್ಷೆ ಅಂತಾರೆ ಇದರ ಸಾಧಕಬಾಧಕಗಳ ಕುರಿತು ಕನಿಷ್ಟ ಚರ್ಚೆಯನ್ನೂ ನಡೆಸಿಲ್ಲ. ಇದೇ ಎಡವಟ್ಟುಗಳು ಮುಂದುವರೆದರೆ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಬೇಕಾದೀತು ಎಂದು ಎಚ್ಚರಿಸಿದರು.

ವೆಬ್ ಕಾಸ್ಟಿಂಗ್ ಏಕೆ ಬೇಕು?ಮಾ.೨೫ ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ, ಈಗ ಏಕಾಏಕಿ ಸರ್ಕಾರಿ ಆದೇಶ ಮಾಡಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪ್ರತಿ ಕೊಠಡಿಗೂ ಸಿಸಿ ಕ್ಯಾಮರಾ, ವೆಬ್ ಕಾಸ್ಟಿಂಗ್ ಮಾಡಬೇಕಂತೆ, ಪದವಿ, ಪಿಯುಸಿ ಪರೀಕ್ಷೆಗಿಲ್ಲದ ಈ ನೀತಿ ಏಕೆ, ವೆಬ್ ಕಾಸ್ಟಿಂಗ್ ಸೌಲಭ್ಯ ಒದಗಿಸಲು ೪ ಲಕ್ಷ ಬೇಕು, ಹಣ ಎಲ್ಲಿಂದ ತರೋದು, ಖಾಸಗಿ ಶಾಲೆಗಳಲ್ಲಿ ಸಂಚಿತ ನಿಧಿ ಇರಲ್ಲ, ಸರ್ಕಾರಿ ಶಾಲೆಗಳಲ್ಲಿ ಒಂದಿಪ್ಪತ್ತು ಸಾವಿರ ಇದ್ದರೆ ಹೆಚ್ಚು ಎಂದರು.

ಐದು ಬಾರಿ ಪಠ್ಯ ಪರಿಷ್ಕರಣೆ ಸರಿಯೇಒಂದೇ ವರ್ಷದಲ್ಲಿ ಐದು ಬಾರಿ ಪಠ್ಯಪರಿಷ್ಕರಣೆ ಮಾಡಲಾಗಿದೆ. ನಿಮ್ಮ ಮಂತ್ರಿಗಳಾದ ಪರಮೇಶ್ವರ್, ಮುಖಂಡ ಶ್ಯಾಮನೂರು ಶಿವಶಂಕರಪ್ಪ ಮತ್ತಿತರರ ದೊಡ್ಡದೊಡ್ಡ ಸಿಬಿಎಸ್ಸಿ, ಐಸಿಎಸ್ಸಿ ಶಾಲೆಗಳಿಗೆ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಬೇಕು, ಬಡಮಕ್ಕಳು ಓದುತ್ತಿರುವ ಶಾಲೆಗಳಿಗೆ ರಾಜ್ಯ ಶಿಕ್ಷಣ ನೀತಿಯೇ ಏಕಿ ತಾರತಮ್ಯ, ಕೇವಲ ರಾಜಕೀಯ ಅಜೆಂಡಾದಡಿ ಎನ್‌ಇಪಿಯನ್ನು ವಿರೋಧಿಸಿ ನಗೆಪಾಟಲಿಗೆ ಒಳಗಾಗಬೇಡಿ ಎಂದು ಆಗ್ರಹಿಸಿದರು.