ಜಲಮೂಲಗಳ ಉಳಿವಿಗಾಗಿ ಪರಿಸರ ಸಂರಕ್ಷಣೆ ಅಗತ್ಯ: ಎಂ.ಆರ್. ಪಾಟೀಲ್

| Published : Mar 23 2024, 01:07 AM IST

ಸಾರಾಂಶ

ಜಲಮೂಲಗಳಾದ ಕೆರೆ, ನದಿ, ಕೊಳವೆ ಬಾವಿ ಬತ್ತದಂತೆ ನೋಡಿಕೊಳ್ಳಬೇಕಿದೆ. ಮನುಷ್ಯ ತನ್ನ ಲಾಲಾಸೆಗೆ ಕಾಡು ನಾಶ ಮಾಡುವ ಕೃತ್ಯಕ್ಕೆ ಇಳಿದಿದ್ದಾನೆ. ಇದರಿಂದ ನಾಡು ಬರ ಎದುರಿಸುವಂತಾಗಿದೆ. ಅಳಿದುಳಿದ ಕಾಡಿನ ಸಂರಕ್ಷಣೆ ಎಲ್ಲರ ಹೊಣೆ ಎಂದ ಅವರು, ವಿಶ್ವದಾದ್ಯಂತ ಶನಿವಾರ ಜಲದಿನ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಸೊರಬ

ಪರಸರದ ಮೇಲಿನ ನಿರಂತರ ದಬ್ಬಾಳಿಕೆ ಜಲಮೂಲಗಳಿಗೆ ತಟ್ಟುತ್ತಿದೆ. ಈ ಕಾರಣದಿಂದ ಮನುಷ್ಯ ಸೇರಿ ಪ್ರಾಣಿ ಸಂಕುಲ ಜಲಕ್ಷಾಮ ಎದುರಿಸುವಂತಾಗಿದೆ. ಇದು ಇನ್ನಷ್ಟು ಬಿಗಡಾಯಿಸುವ ಮೊದಲು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯ ವಕೀಲ ಎಂ.ಆರ್. ಪಾಟೀಲ್ ಹೇಳಿದರು.

ತಾಲೂಕಿನ ಶಾಂತಗೇರಿ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರ ಆಶ್ರಯದಲ್ಲಿ ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಪರ್ಯಾವರಣ ಗತಿವಿಧಿ ಸಂಘಟನೆಗಳು ಹಮ್ಮಿಕೊಂಡಿದ್ದ ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಕೆರೆಪೂಜೆ ನಡೆಸಿ ಮಾತನಾಡಿ ಜಲಮೂಲಗಳಾದ ಕೆರೆ, ನದಿ, ಕೊಳವೆ ಬಾವಿ ಬತ್ತದಂತೆ ನೋಡಿಕೊಳ್ಳಬೇಕಿದೆ. ಮನುಷ್ಯ ತನ್ನ ಲಾಲಾಸೆಗೆ ಕಾಡು ನಾಶ ಮಾಡುವ ಕೃತ್ಯಕ್ಕೆ ಇಳಿದಿದ್ದಾನೆ. ಇದರಿಂದ ನಾಡು ಬರ ಎದುರಿಸುವಂತಾಗಿದೆ. ಅಳಿದುಳಿದ ಕಾಡಿನ ಸಂರಕ್ಷಣೆ ಎಲ್ಲರ ಹೊಣೆ ಎಂದ ಅವರು, ವಿಶ್ವದಾದ್ಯಂತ ಶನಿವಾರ ಜಲದಿನ ನಡೆಯುತ್ತಿದೆ. ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಆಚರಣೆಗೆ ಅರ್ಥ ಮೂಡುತ್ತದೆ ಎಂದರು.

ಗ್ರಾಮಸ್ಥರು ಕೆರೆ ಅತ್ಯಂತ ಸ್ವಚ್ಛವಾಗಿಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಕೆರೆಯ ರಕ್ಷಣೆಗೆ ಕಾಳಜಿ ಇದೆ. ಕೆರೆಯ ಮೌಲ್ಯ, ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ಕಾಯ್ದುಕೊಳ್ಳುವ ಮೂಲಕ ಮುಂಪೀಳಿಗೆಗೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಪರ್ಯಾವರಣದ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೆರೆಯ ಇತಿಹಾಸದ ಬಗ್ಗೆ ವಿವರ ನೀಡಿ, ಆಚರಣೆಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಜಲ ಸಂರಕ್ಷಣೆ, ಜಲ ರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.

ಹೈಕೋರ್ಟ್ ವಕೀಲ ಮಂಜುನಾಥ ಹೆಗಡೆ ಕೆರೆಕೊಪ್ಪ ಮಾತನಾಡಿ, ಮುಂಪೀಳಿಗೆಗೆ ಮಾತ್ರವಲ್ಲ ಬದುಕಿರುವ ನಮಗೂ ನೀರಿನ ಅಗತ್ಯವಿದೆ. ನಾವಿರುವ ತನಕವೂ ಜಲಮೂಲಗಳನ್ನು ಉಳಿಸಿಕೊಂಡರೆ ಮುಂದಿನ ತಲೆಮಾರಿನವರು ಸ್ವಾಸ್ಥ್ಯ ಜೀವನ ನಡೆಸುವ ಜೊತೆಗೆ ಅವರೂ ಉಳಿಸಿಕೊಂಡು ಹೋಗುತ್ತಾರೆ. ಜಲದಿನ ನಿತ್ಯವೂ ಆಗಿರಲಿ ಎಂದು ಆಶಿಸಿದರು.

ಹಿರಿಯ ವಕೀಲ ನಾಗಪ್ಪ ಮಾತನಾಡಿ, ಜೀವ ಜಲದ ರಕ್ಷಣೆಗೆ ಮುಂದಾಗದಿದ್ದರೆ ಶೀಘ್ರದಲ್ಲೇ ಜಲಕ್ಷಾಮ ಎದುರಿಸ ಬೇಕಾದ ಸ್ಥಿತಿ ಬಂದೆರಗುತ್ತದೆ. ಇರುವ ಅರಣ್ಯ ರಕ್ಷಣೆಯ ಜೊತೆಗೆ ಅವಕಾಶವಿದ್ದಲ್ಲಿ ಗಿಡ ನೆಡಿ ಎಂದರು.

ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ಉಪಸ್ಥಿತರಿದ್ದು ಮಾತನಾಡಿದರು. ಪೂಜಾರಿ ಇಂದೂಧರಸ್ವಾಮಿ ಕೆರೆಪೂಜೆ ನೆರವೇರಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ, ಗ್ರಾಮದ ಪ್ರಮುಖ ನೇಮರಾಜ, ಉಮೇಶ್, ಕೃಷ್ಣಮೂರ್ತಿ, ಶೇಷಪ್ಪ, ಎ.ಡಿ. ಬಸವರಾಜ್, ಎಸ್.ಟಿ. ಮಹದೇವಪ್ಪ, ಕುಬೇರಪ್ಪ, ಭಾಗ್ಯಮ್ಮ ಸೊರಬ, ಗ್ರಾಮಸ್ಥರಿದ್ದರು.