ಚಳ್ಳಕೆರೆ ನಗರಸಂತೆ ಮೈದಾನದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಿರ್ಮಿಸುವ ಜಾಗವನ್ನು ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವಾ ಸೌಲಭ್ಯ, ಸಂಚಾರಿ ನಿಯಂತ್ರಣ, ಕಾನೂನು ಬಾಹಿರ ಪ್ಲಾಸ್ಟಿಕ್ ಮಾರಾಟ, ಪ್ರತಿ ವಾರ್ಡ್‌ನಲ್ಲೂ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಖುದ್ದಾಗಿ ಪರಿಶೀಲಿಸಿ ಸಮಸ್ಯೆ ನಿವಾರಿಸಲು ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ನಗರಸಭೆಯ ಆರೋಗ್ಯ ನಿರೀಕ್ಷಕರು ಮತ್ತು ಸಮುದಾಯದ ಸಮನ್ವಯಾಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೀದಿಬದಿ ವ್ಯಾಪಾರಸ್ಥರಿಗೆ ಹಾಗೂ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಎಚ್ಚರಿಕೆ ಬಿಸಿಮುಟ್ಟಿಸಿದ್ದಾರೆ.ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾರ್ಗದರ್ಶನದ ಮೇರೆಗೆ ದಿಢೀರ್ ಕಾರ್ಯಚರಣೆ ನಡೆಸಿದ ಪೌರಾಯುಕ್ತರು ನಗರದ ಕಾಟಪ್ಪನಹಟ್ಟಿ ವ್ಯಾಪ್ತಿಯ ಎರಡೂ ವಾರ್ಡ್ಗಳಿಗೆ ಭೇಟಿ ನೀಡಿ ಸ್ವಚ್ಛತೆ, ನೀರು ಸರಬರಾಜು ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಹದೇವಿ ರಸ್ತೆಗೆ ಭೇಟಿ ನೀಡಿದ ಅವರು, ಕಾನೂನು ಬಾಹಿರವಾಗಿ ಅಂಗಡಿಯಲ್ಲಿ ಪ್ಲಾಸ್ಟಿಕ್ ಕವರ್ ಮಾರಾಟ ಮಾಡುತ್ತಿರುವುದ್ದನ್ನು ಪತ್ತೆಹಚ್ಚಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಹೈಕೋರ್ಟ್ ಮತ್ತು ಪೌರಾಡಳಿತ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಮತ್ತೊಮ್ಮೆ ಪ್ಲಾಸ್ಟಿಕ್ ಮಾರಾಟ ಕಂಡುಬಂದಲ್ಲಿ ಕ್ರಮಿನಲ್ ಕೇಸ್ ದಾಖಸುವುದಲ್ಲದೆ, ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆಯ ಹಿತದೃಷ್ಠಿಯಿಂದ ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ನಾಗರೀಕರು ಸಹ ಉತ್ತಮ ಸಹಕಾರ ನೀಡಬೇಕಿದೆ. ಜಿಲ್ಲೆಯಲ್ಲಿ ಚಳ್ಳಕೆರೆ ನಗರಸಭೆ ಆರ್ಥಿಕ ವಹಿವಾಟು ಸೇರಿದಂತೆ ಹೆಚ್ಚಿನ ಕಾರ್ಯಭಾರವನ್ನು ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಗರಸಭೆ ಆಡಳಿತಕ್ಕೆ ಸೂಕ್ತಸಲಹೆ, ಸಹಕಾರದೊಂದಿಗೆ ಉತ್ತಮ ಸಹಕಾರ ನೀಡಿದಲ್ಲಿ ಚಳ್ಳಕೆರೆ ನಗರಸಭೆ ಇನ್ನೂ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲಿದೆ ಎಂದರು. ಈ ವೇಳೆ ಸಮುದಾಯ ಸಮನ್ವಯಾಧಿಕಾರಿ ಭೂತಯ್ಯ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹಾಲಿಂಗಪ್ಪ, ಗಣೇಶ್, ರುದ್ರಮುನಿ, ಗೀತಾಕುಮಾರಿ ಮುಂತಾದವರು ಉಪಸ್ಥಿತರಿದ್ದರು.