ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾ ಮುಂದೆ ಇದ್ದಾರೆ ಎಂದು ಕಾನೂನು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಲಕ್ಷ್ಮೇಶ್ವರ: ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾ ಮುಂದೆ ಇದ್ದಾರೆ ಎಂದು ಕಾನೂನು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಚಂದನ ಶಾಲೆಯಲ್ಲಿ ಶನಿವಾರದಿಂದ 3 ದಿನಗಳ ಕಾಲ ನಡೆಯುತ್ತಿರುವ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಾಗ ಸಿದ್ದರಾಮಯ್ಯ ಅವರು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ, ರೈತರ ಸಂಕಷ್ಟಕ್ಕೆ ಸ್ವಂದಿಸುವ ಕಾರ್ಯ ಮಾಡಿದರು ಎಂದು ಹೇಳಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿನ ಚಂದನ ಶಾಲೆಯ ಮಕ್ಕಳಿಗೆ ಭಾರತ ರತ್ನ ಪ್ರೊ. ಸಿಎನ್‌ಆರ್ ರಾವ್ ಅವರಂತೆ ಶ್ರೇಷ್ಠ ವಿಜ್ಞಾನಿಗಳಾಗುವ ಕನಸು ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಚಂದನ ಶಾಲೆಯ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ಅವರಿಗೆ ಪ್ರೇರಣೆ ನೀಡುತ್ತಿರುವ ಪ್ರೊ. ಸಿಎನ್‌ಆರ್ ರಾವ್ ಅವರು ನಮ್ಮ ದೇಶದ ಶ್ರೇಷ್ಠ ವಿಜ್ಞಾನಿಯಾಗಿದ್ದಾರೆ ಎಂದು ಹೇಳಿದರು.

ಚಂದನ ಶಾಲೆ ಕೊಡಮಾಡುವ ಚಂದನ ಶ್ರೀ ಪುರಸ್ಕೃತ ಉತ್ತಮ ಆಡಳಿತಗಾರ, ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ ಅವರಿಗೆ ಸಂದಿರುವುದು ಅಭಿಮಾನದ ಸಂಗತಿ. ಆಡಳಿತಾತ್ಮಕ ನಿರ್ಧಾರದ ಅನುಗುಣವಾಗಿ ರಾಜ್ಯದಲ್ಲಿ ಹಲವು ನೂತನ ಜಿಲ್ಲೆಗಳನ್ನು ಮಾಡುವಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಾಗಿದ್ದ ಬಿ.ಎಸ್. ಪಾಟೀಲ ಅವರ ಕೊಡುಗೆ ಅಪಾರ ಎಂದು ಹೇಳಿದ ಅವರು, ಕಬ್ಬು ಬೆಳಗಾರರು, ಹೆಸರು ಹಾಗೂ ಮೆಕ್ಕೆ ಜೋಳ ಬೆಳೆಗಾರರ ಸಂಕಷ್ಟ ಪರಿಹರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಉದಾಹರಣೆ ಎಂದು ಹೇಳಿದರು.

ಈ ವೇಳೆ ಚಂದನಶ್ರೀ ಪ್ರಶಸ್ತಿ ಸ್ವೀಕರಿಸಿದ ನಿವೃತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಮಾತನಾಡಿ, ಉತ್ತಮ ಆಡಳಿತಗಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಚ್ಚು ಸಂತೋಷ ತಂದಿದೆ. ಭಾರತ ರತ್ನ ಪ್ರೊ. ಸಿಎನ್‌ಆರ್ ರಾವ್ ಅವರ 11 ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಚಂದನಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ನೀಡಿದೆ ಎಂದು ಹೇಳಿದರು.