ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇವಸ್ಥಾನ, ಶಾಲಾ-ಕಾಲೇಜುಗಳ ಆವರಣದಲ್ಲಿ ನಿರಂತರವಾಗಿ ಗಿಡಗಳನ್ನು ನೆಡಲಾಗುತ್ತಿದೆ.
ಹಗರಿಬೊಮ್ಮನಹಳ್ಳಿ: ಗಿಡ, ಮರ ನೆಡುವ ಜತೆಗೆ ನೀರಿನ ಹಿತಮಿತ ಬಳಕೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಮಾಡಿದರೆ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಪರಿಸರವಾದಿ ಹಾಗೂ ಎಸ್.ಬಿ.ಐ. ನಿವೃತ್ತ ಪ್ರಬಂಧಕ ಗಣೇಶ್‌ರಾವ್ ಹವಾಲ್ದಾರ್ ಪ್ರತಿಪಾದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ತಾಲೂಕು ಘಟಕ ಶನಿವಾರ ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮೆಲ್ಲರ ಪರಿಸರ ಪ್ರಜ್ಞೆಯ ಅರಿವು ಕ್ಷೀಣಿಸುತ್ತಿದೆ. ಪರಿಣಾಮವಾಗಿ ಹವಾಮಾನ ವೈಪರೀತ್ಯ ನಿರಂತರವಾಗಿದೆ ಹಾಗೂ ಮಳೆಗಾಲದ ಅವಧಿ ಕುಸಿಯುತ್ತಿದೆ. ಪರಿಸರ ಸಂರಕ್ಷಣೆ ಮಾಡುವಲ್ಲಿ ಯುವಕರು ಮುಂದೆ ಬರಬೇಕು. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಆಶಿಸಿದರು.
ಯೋಜನೆಯ ತಾಲೂಕು ಯೋಜನಾಧಿಕಾರಿ ವಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇವಸ್ಥಾನ, ಶಾಲಾ-ಕಾಲೇಜುಗಳ ಆವರಣದಲ್ಲಿ ನಿರಂತರವಾಗಿ ಗಿಡಗಳನ್ನು ನೆಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಸಸಿಗಳನ್ನು ನೀಡಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಗಣೇಶರಾವ್ ಹವಾಲ್ದಾರ್ ಅವರು ಸಾರ್ವಜನಿಕರಿಗೆ ಕರಿಬೇವು, ಸೀತಾಫಲ ಹಾಗೂ ಇತರ ಹಣ್ಣು ಮತ್ತು ಹೂವಿನ ಗಿಡಗಳನ್ನು ಉಚಿತವಾಗಿ ವಿತರಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರಪ್ಪ, ನವೀನ್ ಸ್ಪೋರ್ಟ್ಸ್ ಕ್ಲಬ್‌ನ ಈ. ಕೃಷ್ಣಮೂರ್ತಿ, ಮುಖಂಡ ಕಿನ್ನಾಳ್ ಸುಭಾಷ್, ಆಂಜನೇಯ ದೇವಸ್ಥಾನ ಸಮಿತಿಯ ಕೇಶವರೆಡ್ಡಿ, ವಿರೂಪಾಕ್ಷ, ಉಮಾಪತಿ, ನೀಲಕಂಠಪ್ಪ ಹಾಗೂ ಯೋಜನೆಯ ಸೇವಾ ಪ್ರತಿನಿಧಿ ಯು. ಯಶೋದಾ ಮತ್ತಿತರರಿದ್ದರು.ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.