ಶಾ ರಾಜೀನಾಮೆ ನೀಡುವವರೆಗೂ ಹೋರಾಟ: ಕಳ್ಳಿಮನಿ

| Published : Dec 21 2024, 01:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ಬಗ್ಗೆ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಅವರ ಮಾತಿನಿಂದ ಇಡೀ ದೇಶವಾಸಿಗಳಿಗೆ ನೋವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ಬಗ್ಗೆ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಅವರ ಮಾತಿನಿಂದ ಇಡೀ ದೇಶವಾಸಿಗಳಿಗೆ ನೋವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಆಕ್ರೋಶ ವ್ಯಕ್ತಪಡಿಸಿದರು.

ಅಹಿಂದ ಹಾಗೂ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಹೇಳಿಕೆ ಖಂಡಿಸಿ ಶನಿವಾರ ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಹೋರಾಟ ನಡೆಸಿ, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟದಲ್ಲಿ ಪ್ರಗತಿಪರರು, ಮಹಿಳಾ ಸಂಘಟನೆಗಳು, ಯುವ ಸಂಘಟನೆಗಳು, ವ್ಯಾಪಾರಸ್ಥರು ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ಅಮಿತ್ ಶಾ ಕ್ಷಮೆ ಕೇಳಬೇಕು ಹಾಗೂ ರಾಜೀನಾಮೆ ಕೊಡಬೇಕು. ಅಲ್ಲಿವರೆಗೆ ಹೋರಾಟ ನಡೆಸಲಾಗುವುದು. ಹಾಗಾಗಿ ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಗೃಹಮಂತ್ರಿ ಅಮಿತ್ ಶಾ ಅವರು ದೇಶ ಖಂಡಿಸುವಂತ ಮಾತುಗಳನ್ನು ಏಳುಬಾರಿ ಹೇಳಿದ್ದು, ಇಂದು ಹೇಳಿಲ್ಲ ಎನ್ನುತ್ತಾರೆ. ಲೋಕಸಭೆ ಒಳಗೆ ಹೋಗುವಾಗ ಸಂವಿಧಾನಕ್ಕೆ ನಮಿಸಿ ಹೋಗುತ್ತೀರಿ, ಒಳಗೆ ಹೋದಮೇಲೆ ಅದನ್ನು ತಿರುಚುತ್ತೀರಿ. ಬಾಬಾಸಾಹೇಬ ದಲಿತ ಎಂದು ನೋಡುತ್ತಿದ್ದೀರಿ, ಅವರೊಂದು ಅಸ್ಮಿತೆ ಎಂದು ನೋಡುತ್ತಿಲ್ಲ. ಅಮಿತ್ ಶಾ ಕ್ಷಮೆ ಕೇಳುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಶ್ರೀನಾಥ ಪೂಜಾರಿ, ಅಡಿವೆಪ್ಪ ಸಾಲಗಲ, ಅನಸೂಯಾ, ಹಿರೇಗೌಡರ, ಎಂ.ಸಿ.ಮುಲ್ಲಾ ಮಾತನಾಡಿದರು. ಫಯಾಜ್ ಕಲಾದಗಿ, ಪ್ರಭುಗೌಡ ಪಾಟೀಲ್, ಆರತಿ ಶಹಾಪುರ, ಮಾಬುಬಿ, ಬಾಲಾಜಿ ಕಾಂಬಳೆ, ಚನ್ನು ಕಟ್ಟಿಮನಿ ಇದ್ದರು.