ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಉಳಿಸಿಕೊಳ್ಳಲು, ಜಿಲ್ಲೆಯ ಜನರ ಪಾಲಿಕೆ ಮಾರಕವಾಗುವ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಕೆಲವು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತರಡ ಹಾಕಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಸಾಕಾರಗೊಳ್ಳಲು ಅವಕಾಶ ಮಾಡಿಕೊಟ್ಟರೆ ಮುಂದೆ ನಮ್ಮ ಪಾಲಿನ ನೀರನ್ನು ಕಳೆದುಕೊಂಡು ಹಾಹಾಕಾರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.ಈಗಿನಿಂದಲೇ ಎಚ್ಚೆತ್ತುಕೊಂಡು ಹೋರಾಟದ ಮೂಲಕ ನೀರು ಉಳಿಸಿಕೊಳ್ಳಬೇಕು ಎಂದರು.ಹೇಮಾವತಿ ಯೋಜನೆಯ ಭಾಗವಾದ ಹೇಮಾವತಿ ನಾಲಾ ವಲಯ, ತುಮಕೂರು ವ್ಯಾಪ್ತಿಯಲ್ಲಿ ತುಮಕೂರು ಶಾಖಾ ನಾಲೆ ಹಾಗೂ ನಾಗಮಂಗಲ ಶಾಖಾ ನಾಲೆ ಮತ್ತು ಬಾಗೂರು ನವಿಲೆ ಸುರಂಗ ನಿರ್ಗಮನ ಏತ ನೀರಾವರಿ ಯೋಜನೆಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದ್ದು, ತುಮಕೂರುಜಿಲ್ಲೆ ಹಾಗೂ ಮಂಡ್ಯಜಿಲ್ಲೆಯ ನಾಗಮಂಗಲ ತಾಲೂಕಿನ ಒಟ್ಟಾರೆ 2,89,230 ಎಕರೆಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಮತ್ತು ತುಮಕೂರು, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲವು ತಾಲ್ಲೂಕಗಳ ಕುಡಿಯುವ ನೀರಿನ ಬೇಡಿಕೆಗಳನ್ನು ಪೂರೈಸುವುದು ಒಳಗೊಂಡಂತೆ 25.31 ಟಿಎಂಸಿ ನೀರಿನ ಹಂಚಿಕೆಆಗಿರುತ್ತದೆ. ಇದರಲ್ಲಿ ನೀರಾವರಿಗೆ 18.70 ಟಿಎಂಸಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ 6.61 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದರು. ಹೇಮಾವತಿ ಜಲಾಶಯದ ಮುಖ್ಯಕಾರಣಕರ್ತರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮತ್ತು ಡಾ.ಕೆ.ಎಲ್. ರಾವ್ ಅವರು.ತುಮಕೂರು ಜಿಲ್ಲೆಗೆ ಹೇಮಾವತಿ ನೀರು ತರಲು ಅನೇಕ ಮಹನೀಯರು ಹೋರಾಟ ನಡೆಸಿ ಶ್ರಮಪಟ್ಟಿದ್ದಾರೆ. ಮಾಜಿ ಸಚಿವ ದಿವಂಗತ ವೈ.ಕೆ .ರಾಮಯ್ಯನವರು ಹೇಮಾವತಿ ನೀರಿನಲ್ಲಿ ನಮ್ಮ ಪಾಲು ಇದೆ, ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆತರಲೇಬೇಕೆಂದು ಹೋರಾಟವನ್ನು ಆರಂಭಿಸಿದರು.ಈ ಹಂತದಲ್ಲಿ ತಾವೂ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಗಿ ಸೊಗಡು ಶಿವಣ್ಣ ಹೇಳಿದರು. ನೀರಾವರಿ ತಜ್ಞ ಸಂಪಿಗೆ ಜಗದೀಶ್ ಮಾತನಾಡಿ, ಜಿಲ್ಲೆಯ ಜನರಿಗೆ ಹೇಮಾವತಿ ನೀರು ಜೀವನಾಡಿ, ನಮಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಲು ಹೋರಾಟವೇ ಮುಂದಿನ ದಾರಿ.ಇದಕ್ಕಾಗಿ ಎಲ್ಲರೂ ಪಕ್ಷ ಬೇಧ ಮರೆತು ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ರೈತ ಸಂಘದ ಜಿಲ್ಲಾದ್ಯಕ್ಷ ಹೆಚ್.ಡಿ.ರಾಮಲಿಂಗಯ್ಯ, ಮುಖಂಡರಾದ ಡಾ.ಆರ್.ಮಂಜುನಾಥ್, ಗೋವಿಂದರಾಜು, ಎ.ಆರ್.ಶ್ರೀಕಾಂತ್, ತರಕಾರಿ ಮಹೇಶ್, ಆಟೋ ನವೀನ್, ಕೆ. ಹರೀಶ್, ಎನ್. ಗಣೇಶ್, ಮದನ್‌ಸಿಂಗ್, ವಿನಯ್ ಅದ್ವೈತ ಮೊದಲಾದವರು ಉಪಸ್ಥಿತರಿದ್ದರು.
ಹೇಮಾವತಿ ನೀರು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ
ಕೆಲವು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತರಡ ಹಾಕಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.