ರಾಮನಗರ: ನಗರದ ಜಾನಪದ ಲೋಕದಲ್ಲಿ ಫೆ.7 ಮತ್ತು 8ರಂದು ವಿದ್ಯಾರ್ಥಿ ಜಾನಪದ ಲೋಕೋತ್ಸವ-2026 ಆಯೋಜಿಸಲಾಗಿದೆ

ರಾಮನಗರ: ನಗರದ ಜಾನಪದ ಲೋಕದಲ್ಲಿ ಫೆ.7 ಮತ್ತು 8ರಂದು ವಿದ್ಯಾರ್ಥಿ ಜಾನಪದ ಲೋಕೋತ್ಸವ-2026 ಆಯೋಜಿಸಲಾಗಿದೆ.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಜಾನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ.7ರಂದು ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಚಲನಚಿತ್ರ ಮತ್ತು ರಂಗಭೂಮಿ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಚಾಲನೆ ನೀಡಲಿದ್ದು, ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಶಾಸಕ ಕೆ.ರಾಜು ಕರಕುಶಲ ಮೇಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಮೈಸೂರು, ಚಿಕ್ಕಮಗಳೂರು, ತುಮಕೂರು, ಉಡುಪಿ, ಮಂಡ್ಯ, ಬೆಳಗಾವಿ, ಹಾಸನ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ನಗಾರಿ ಮೇಳ, ವೀರಗಾಸೆ, ಸೋಮನ ಕುಣಿತ, ಕಂಗಿಲು ಕುಣಿತ, ತಮಟೆ ವಾದನ, ಕೋಲಾಟ, ಕರಪಾಲ ಮೇಳ, ಗಾರುಡಿ ಗೊಂಬೆ ವಿವಿಧ ಕಲಾ ಪ್ರದರ್ಶನ ನೀಡಲಿದ್ದಾರೆ. ಆನಂತರ ಬೈರನಹಳ್ಳಿ ಶಿವರಾಮ್ ನಿರ್ದೇಶನದಲ್ಲಿ ಜಾನಪದ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಕೆರೆಗೆ ಹಾರ ಜನಪದ ರೂಪಕ ಪ್ರದರ್ಶಿಸುವರು ಎಂದರು.

ಪ್ರಶಸ್ತಿ ಪ್ರದಾನ:

ಫೆ.8ರಂದು ಬೆಳಗ್ಗೆ 10.30ಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣರವರ ಅಧ್ಯಕ್ಷತೆಯಲ್ಲಿ ಯುವಜನರಲ್ಲಿ ಜನಪದ ಗಾಯನ ಮತ್ತು ಕಲೆಗಳ ಸಂವರ್ಧನೆ ವಿಷಯ ಕುರಿತು ಚರ್ಚೆ ಸಂವಾದ ನಡೆಯಲಿದೆ. ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಆಶಯ ನುಡಿಗಳಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಜನಪದ ಗೀತ ಗಾಯನೋತ್ಸವ, ಸಂಜೆ 4 ಗಂಟೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಸೂಫೀಯಾ ಢಮಾಮಿ ನೃತ್ಯ ತಂಡ ಸಿದ್ಧಿಯರ ಡಮಾಮಿ ನೃತ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಡಾ.ರತ್ನಮ್ಮ ಮತ್ತು ಸಂಗಡಿಗರು ಸೋಲಿಗರ ನೃತ್ಯ ಪ್ರದರ್ಶಿಸುವರು. ನಂತರ ಆಧುನಿಕ ಗಾಯಕರ ಜನಪದ ಗೀತ ಸಂಭ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 5.30ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ಆಂಧ್ರ ಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಜಯರಾಮ್ ರಾಯ್ ಪುರ ಭಾಗವಹಿಸಲಿದ್ದಾರೆ. ಆನಂತರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ದೊಡ್ಡ ಬ್ಯಾಡರಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು (ಕರ್ಣಾರ್ಜುನರ ಕಾಳಗ) ಮೂಡಲಪಾಯ ಯಕ್ಷಗಾನ ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಿದರು.

ಈ ಎರಡೂ ದಿನಗಳ ಕಾಲವೂ ರಾಜ್ಯದ ಕಲಾ ತಂಡಗಳಿಂದ ವೈವಿಧ್ಯಮಯ ಕಲಾ ಪ್ರದರ್ಶನ, ಜನಪದ ಗೀತ ಗಾಯನ, ಕರಕುಶಲ ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಕುಂಬಾರಿಕೆ, ಬುಟ್ಟಿ ಎಣೆಯುವಿಕೆ, ಗಾರುಡಿ ಗೊಂಬೆ, ಪೆಟ್ಟಿಗೆ ಮಾರಮ್ಮ, ದಾಸಪ್ಪ ಜೋಗಪ್ಪ, ಕೊಂಬು ಕಹಳೆ, ಹುಲಿವೇಷ, ಬಳೆ ಮಲ್ಲಾರ ಪ್ರದರ್ಶನ ಇರಲಿದೆ ಎಂದು ಬೋರಲಿಂಗಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.

ಬಾಕ್ಸ್‌............

ಪ್ರಶಸ್ತಿ ಪುರಸ್ಕೃತರು:

ನಾಡೋಜ ಎಚ್.ಎಲ್. ನಾಗೇಗೌಡ-ಜಾನಪದ ಲೋಕಶ್ರೀ ಪ್ರಶಸ್ತಿಗೆ ಜಾನಪದ ವಿದ್ವಾಂಸರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ, ನಾಡೋಜ ಡಾ. ಜಿ. ನಾರಾಯಣ- ಜಾನಪದ ಲೋಕ ಪ್ರಶಸ್ತಿಗೆ ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣೆ ವಾದನ ಕಲಾವಿದ ಚಿಕ್ಕಣ್ಣ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಜಾನಪದ ಛಾಯಾಗ್ರಾಹಕ ಡಾ.ಸಿರಿಗಂಧ ವಿ.ಶ್ರೀನಿವಾಸ ಮೂರ್ತಿ, ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿಗೆ ಬೆಂ.ದಕ್ಷಿಣ ಜಿಲ್ಲೆಯ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ ಭೈರಪ್ಪ (ಗಂಗಣ್ಣ) ಹಾಗೂ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಗೆ ಸ್ವಾತಂತ್ರ್ಯದ ಕಿಡಿಗಳು ಪುಸ್ತಕದ ಲೇಖಕ ಹೂಲಿ ಶೇಖರ್ ಭಾಜನರಾಗಿದ್ದಾರೆ.

ಜಾನಪದ ಲೋಕ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆ ಜೋಗುಳಪದ ಹಾಡುಗಾರ್ತಿ ಚಿನ್ನಮ್ಮ, ಸೋಲಿಗ ಕಲಾವಿದೆ ಡಾ.ಎಸ್.ರತ್ನಮ್ಮ, ಮಂಡ್ಯ ಜಿಲ್ಲೆಯ ಪೂಜಾ ಮತ್ತು ಮರಗಾಲು ಕುಣಿತ ಕಲಾವಿದ ಕೆ.ಪಿ.ದೇವರಾಜು, ರಾಯಚೂರು ಜಿಲ್ಲೆ ತತ್ವಪದ ಕಲಾವಿದ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ತಂಬೂರಿ ಸಿದ್ದರಾಜು, ಗೊರವ ಕುಣಿತ ಕಲಾವಿದ ಎಂ.ಬಸವರಾಜು, ಧಾರವಾಡ ಜಿಲ್ಲೆಯ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕಾಸರಗೋಡಿನ ಯಕ್ಷಗಾನ ವೇಷಧಾರಿ ಕಲಾವಿದ ಚನಿಯಪ್ಪನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಟಿ.ಶಾರದಮ್ಮ, ಬೀದರ್ ಜಿಲ್ಲೆಯ ಲಂಬಾಣಿ ನೃತ್ಯಗಾರ್ತಿ ಭಾರತಿ ಬಾಯಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಯಕ್ಷಗಾನ ಕಲಾವಿದ ಬಿ.ಎಸ್.ಗೌಡ (ಬೀರಪ್ಪ ಶಿವುಗೌಡ), ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ ಮಹಾಲಿಂಗಪ್ಪ ಕರಡಿ ಆಯ್ಕೆಯಾಗಿದ್ದಾರೆ.

4ಕೆಆರ್ ಎಂಎನ್ 5,6,7,8,9.ಜೆಪಿಜಿ

5.ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

6.ನಾಡೋಜ ಎಚ್.ಎಲ್. ನಾಗೇಗೌಡ-ಜಾನಪದ ಲೋಕಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಹಿ.ಶಿ.ರಾಮಚಂದ್ರೇಗೌಡ.

7.ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ ಪುರಸ್ಕೃತ ಡಾ.ಕೆ.ಚಿನ್ನಪ್ಪಗೌಡ

8.ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ ಚಿಕ್ಕಣ್ಣ

9.ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಪುರಸ್ಕೃತ ಡಾ.ಸಿರಿಗಂಧ ವಿ.ಶ್ರೀನಿವಾಸ ಮೂರ್ತಿ