ವಿದ್ಯಾರ್ಥಿಗಳ ಮನಸೋ ಇಚ್ಚೆ ಥಳಿಸಿ, ಕಾಲಲ್ಲಿ ತುಳಿಯುವ ಭಯಾನಕ ದೃಶ್ಯ ವೈರಲ್ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ನಡೆಯುತ್ತಿರುವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಾಲಕ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಅಲ್ಲಿನ ಅಪ್ರಾಪ್ತ ಬಾಲಕರ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ಮಠದ ಸಿಬ್ಬಂದಿಯಾಗಿರುವ ರವಿಚಂದ್ರ ಎಂಬಾತ ಅಪ್ರಾಪ್ತ ಮಕ್ಕಳ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಹಿಡಿದು ಥಳಿಸುವುದು, ತಲೆ ಹಿಡಿದು ಗೋಡೆಗೆ ಅಪ್ಪಳಿಸುವುದು, ಕಾಲಲ್ಲಿ ತುಳಿಯುವ ದೃಶ್ಯಗಳು ವಿಡಿಯೋದಲ್ಲಿವೆ. ಮಠದ ಭಕ್ತರು ಮಕ್ಕಳ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಅದನ್ನು ಚಿತ್ರದುರ್ಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ವಾಟ್ಸಪ್‌ ಮೂಲಕ ಕಳುಹಿಸಿ, ಪ್ರಕರಣವನ್ನು ವಿವರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಅಲ್ಲದೆ ದೂರನ್ನು ಸಹ ದಾಖಲಿಸಿದ್ದಾರೆ.

ಧಯವೇ ಧರ್ಮದ ಮೂಲವೆಂಬ ಬಸವಣ್ಣನ ಆಶಯಗಳ ನಿಜ ದನಿಯಲ್ಲಿ ಅನುಷ್ಠಾನ ಮಾಡುತ್ತಿರುವ ಬಸವಾನುಯಾಯಿಗಳ ನೆಲೆಯಲ್ಲಿ ಕೌರ್ಯನರ್ತನ ಮಾಡಿರುವುದು ಪೋಷಕರ ಮನದಲ್ಲಿ ಆತಂಕ ಮೂಡಿಸಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಸಂಜೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಭರಮಸಾಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಸಿರಿಗೆರೆಗೆ ಭೇಟಿ ನೀಡಿ ಮೊದಲ ಹಂತದ ಸ್ಥಳ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಪುನಃ ಮಂಗಳವಾರ ಮಕ್ಕಳ ರಕ್ಷಣಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಅಂತಿಮವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ. ಆರೋಪಿಯಾಗಿರುವ ರವಿಚಂದ್ರ ಈಗ ತಲೆ ತಪ್ಪಿಸಿಕೊಂಡಿದ್ದಾನೆ. ಆತನನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌, ಡೆಪ್ಯುಟಿ ಸೂಪರಿಂಟೆಂಡೆಂಟ್‌ ಅರುಣ್‌ ನಾಗೇಗೌಡ, ಭರಮಸಾಗರ ವೃತ್ತ ನಿರೀಕ್ಷಕ ಪ್ರಸಾದ್‌ ಮುಂತಾದವರು ಹಾಸ್ಟೆಲ್‌ಗೆ ಭೇಟಿ ನೀಡಿ ಪರೀಶಲಿಸಿದರು. ಈಗ ರಜೆಯ ಕಾಲವಾಗಿರುವುದರಿಂದ ವಿಚಾರಣೆ ನಡೆಸಲು ದೌರ್ಜನ್ಯಕ್ಕೊಳಗಾಗಿರುವ ಬಾಲಕರು ಲಭ್ಯ ಇರಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋದಲ್ಲಿ ಇರುವ ದೃಶ್ಯಾವಳಿಗಳ ನೋಡಿ ಅಚ್ಚರಿಯಾಗಿದೆ. ಎರಡು ವರ್ಷಗಳಿಂದ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಇದರ ಹಿಂದೆ ಏನೋ ಸಂಚು ಇರುವಂತೆ ಕಾಣಿಸುತ್ತಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಅತ್ಯಂತ ಪ್ರೀತಿಯಿಂದ ಕಾಣಲಾಗುತ್ತದೆ. ಎಂದೋ ಚಿತ್ರಿಕರಿಸಿದ ವಿಡಿಯೋ ಇದಾಗಿದೆ ಎನ್ನಿಸುತ್ತಿದೆ. ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿ ಸಿರಿಗೆರೆ ವಿದ್ಯಾರ್ಥಿನಿಲಯಗಳಿಗೆ ಕಪ್ಪು ಚುಕ್ಕೆ ಹಚ್ಚುವ ಪ್ರಯತ್ನ ಇದಾಗಿದೆ. ಇಂತಹದ್ದೊಂದು ಘಟನೆ ಸಿರಿಗೆರೆ ಹಾಸ್ಟೆಲ್ ನಲ್ಲಿ ನಡೆಯಲು ಸಾಧ್ಯವೇ ಇಲ್ಲೆ.

-ಕೆ.ಎನ್.ನಟರಾಜ್, ವಾರ್ಡನ್, ಸಿರಿಗೆರೆ ಹಾಸ್ಟೆಲ್

ಸಿರಿಗೆರೆ ಮಠದ ವಿದ್ಯಾರ್ಥಿ ನಿಲಯಗಳಿಗೆ ಅದರದ್ದೇ ಆದ ಪರಂಪರೆ, ಇತಿಹಾಸವಿದೆ. ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಹಾಗೂ ಖಾಸಗಿ ವಲಯದ ಉನ್ನತ ಸ್ಥಾನದಲ್ಲಿದ್ದಾರೆ. ಹಾಲಿ ವೈರಲ್ ಆಗಿರುವ ವಿಡಿಯೋ ಅಸಲಿ ತನದ ಬಗ್ಗೆ ಕೆಲ ಅನುಮಾನಗಳು ಮೂಡಿವೆ. ಪರೀಕ್ಷೆಗಾಗಿ ಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳಿಸಲಾಗುವುದು. ಪ್ರಕರಣ ದಾಖಲಾಗಿದ್ದು ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಲಿದೆ.

-ವಿಜಯಕುಮಾರ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ