ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಮಳೆಯ ಅಬ್ಬರ ಬಾರಿ ಅವಾಂತರ ಸೃಷ್ಟಿಸಿದ್ದು ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.ಮೊಳಕಾಲ್ಮೂರು ಪಟ್ಟಣ ಸೇರಿ ರಾಯಪುರ, ಬಿಜಿಕೆರೆ ಸುತ್ತಲಿನ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಾರಿ ಬಿರುಗಾಳಿ ಮಳೆಯಾಗಿದೆ. ಗುಡುಗು ಸಿಡಿಲಿನಿಂದ ಕೂಡಿದ ಬಿರು ಮಳೆ ಸುರಿದಿದೆ. ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ, ಮರ್ಲಹಳ್ಳಿ, ಚಿಕ್ಕೋಬನಹಳ್ಳಿ, ಮುತ್ತಿಗಾರಹಳ್ಳಿ, ತುಮಕೂರ್ಲಹಳ್ಳಿ, ರಾಯಪುರ, ಸೂಲೇನಹಳ್ಳಿ ಗುಂಡ್ಲೂರು, ಯರೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಾರಿ ಬಿರುಗಾಳಿಗೆ ಅಲ್ಲಲ್ಲಿ ಮರಗಿಡಗಳು ಮುರಿದು ಬಿದ್ದಿವೆ. ಬಾರಿ ಗಾಳಿಯ ಹೊಡೆತಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹತ್ತಾರು ಗ್ರಾಮಗಳು ಕಲ್ಲಲ್ಲಿ ಕಾಲ ಕಳೆಯುವಂತಾಗಿತ್ತು ಮಳೆಯಿಂದಾಗಿ ಬೇಸಿಗೆಯ ಹೊಡೆತಕ್ಕೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪು ನೀಡಿದೆ. ರೈತರ ಕೃಷಿ ಭೂಮಿಗಳಿಗೆ ಜೀವ ಕಳೆ ಬಂದಿದ್ದು ರೈತರಲ್ಲಿ ಸಂತಸ ವ್ಯಕ್ತವಾಗಿದೆ. ದೇವಸಮುದ್ರ ಹೋಬಳಿಯಲ್ಲಿ ಮಳೆ ಇಲ್ಲದಾಗಿದ್ದು ಕಸಬಾ ಹೋಬಳಿಯಲ್ಲಿ ಮಳೆ ಬಾರಿ ಅವಾಂತರ ಸೃಷ್ಟಿಸಿದೆ.
*ಮುರಿದು ಬಿದ್ದ 24 ವಿದ್ಯುತ್ ಕಂಬಗಳು: ಕಳೆದ ರಾತ್ರಿ ಸುರಿದ ಭರ್ಜರಿ ಮಳೆಯಿಂದ ತಾಲೂಕಿನಲ್ಲಿ ಒಟ್ಟು 24 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆಈ ಪೈಕಿ ಎದ್ದಲ ಬೊಮ್ಮಯ್ಯನಹಟ್ಟಿ 16, ಕಪ್ಪಡಾ ಬಂಡಿಹಟ್ಟಿ, 2 ಮುತ್ತಿಗಾರಹಳ್ಳಿ 1 ಕೋನಸಾಗರ 2, ಬಿಜಿಕೆರೆ 1 ಮಾರಮ್ಮನಹಳ್ಳಿ 1ಸೇರಿದಂತೆ ನಾಲ್ಕು ಟ್ರಾನ್ಸ್ ಫಾರ್ಮರ್‌ಗಳು ಸುಟ್ಟಿದ್ದು ಎದ್ದಲ ಬೊಮ್ಮಯ್ಯನಹಟ್ಟಿಯಲ್ಲಿ ಮನೆಗಳ ವೈರ್‌ಗಳು ತುಂಡಾಗಿ 20ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
*20ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ: ಪಟ್ಟಣ ಸಮೀಪದ ಆಂಧ್ರಗಡಿಗೆ ಅಂಟಿಕೊಂಡಂತಿರುವ ಎದ್ದಲಬೊಮ್ಮಯ್ಯನಹಟ್ಟಿಯಲ್ಲಿ ಗುಡುಗು ಸಿಡಿಲ ಸಹಿತ ಬಿರುಗಾಳಿ ಮಳೆಗೆ ಮರಗಿಡಗಳು ಬಿದ್ದು ಬಾರಿ ಅವಾಂತರ ಸೃಷ್ಟಿಸಿದೆ. ಅಲ್ಲಿನ 20ಕ್ಕೂ ಹೆಚ್ಚಿನ ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಮರ ಬಿದ್ದು ಮೂರು ಆಟೋ ಮತ್ತು ಬೈಕ್ ಗಳು ಜಖಂಗೊಂಡಿವೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಮುರಿದ ಬಿದ್ದ ಪರಿಣಾಮ ಪಟ್ಟಣ ಮತ್ತು ಆಂಧ್ರವನ್ನು ಸಂಪರ್ಕಿಸುವ ರಸ್ತೆ ಬಂದ್ ಆಗಿ ಕ್ಷಣ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನಗಳು ಸಾಲು ಗಟ್ಟಿ ನಿಂತಿದ್ದವು.
*ಹಾರಿ ಹೋದ ಡಾಬಾ ಮೇಲ್ಛಾವಣಿ: ಬಿಜಿಕೆರೆ ಯಲ್ಲಿ ಗಾಳಿಯ ಮಳೆಯ ಆರ್ಭಟಕ್ಕೆ ಜನತೆ ತತ್ತರಿಸುವಂತಾಗಿತ್ತು. ನೂತನ ಆಸ್ಪತ್ರೆ ಸಮೀಪದಲ್ಲಿ ತಗಡಿನ ಸೀಟುಗಳು ಹಾರಿ ಹೋಗಿವೆ. ರಸ್ತೆಗಳಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ. ರೈಲ್ವೆ ಗೇಟ್ ಸಮೀಪದಲ್ಲಿನ ಸೂರ್ಯ ಡಾಬಾ 10 ಗುಡಿಸಲುಗಳ ಮೇಲ್ಛಾವಣಿ ಹಾರಿ ಹೋಗಿದ್ದು. ಅಡುಗೆ ಶೆಡ್ ಸಂಪೂರ್ಣವಾಗಿ ಹಾರಿ ಹೋಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ಇದಲ್ಲದೆ ಪಕ್ಕದಲ್ಲಿನ ನರ್ಸರಿಯ ಬಟ್ಟೆ ಹರಿದು ಹೋಗಿ ಬಾರಿ ನಷ್ಟ ಉಂಟಾಗಿದೆ. ಅಲೆಗಳಿಯಿಂದ ವಿದ್ಯುತ್ ಕಡಿತಗೊಂಡು ಜನತೆ ಇಡೀ ರಾತ್ರಿ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು.ಮೊಳಕಾಲ್ಮುರು 16.2,ರಾಯಪುರ 16.6, ಬಿಜಿಕೆರೆ 32.2 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.