ಸಾರಾಂಶ
ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸಾಧನೆಯೆಡೆಗೆ ಸಾಗಬೇಕು..
ಮೂಡಿಗೆರೆ : ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸಾಧನೆಯೆಡೆಗೆ ಸಾಗಬೇಕು ಎಂದು ಮೂಡಿಗೆರೆ ಜೆಸಿಐ ಪೂರ್ವಾಧ್ಯಕ್ಷ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದರು.
ಜೆಸಿಐ ಸಂಸ್ಥೆ ಪಟ್ಟಣದ ಸೈಂಟ್ ಮಾರ್ಥಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಎದೆಗುಂದದೇ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದುದು, ಇಲ್ಲಿ ಕಲಿತದ್ದು ಬದುಕಿನಿದ್ದಕ್ಕೂ ದಾರಿದೀಪವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜ್ಞಾನಾರ್ಜನೆ ಮಾಡಬೇಕು. ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚುಟುವಟಿಕೆಗಳಲ್ಲಿಯೂ ಸಕ್ರಿಯರಾಗಿ ಭಾಗವಹಿಸಬೇಕು. ಸ್ಪೂರ್ತಿದಾಯಕ ವ್ಯಕ್ತಿಗಳ ಜೀವನಚರಿತ್ರೆ ಓದುವ ರೂಢಿಬೆಳೆಸಿಕೊಳ್ಳಬೇಕು ಎಂದರು.
ಗುರಿ ಮತ್ತು ಸಾಧನೆ ಕುರಿತು ಜೆಸಿಐ ವಲಯ ತರಬೇತುದಾರ, ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಉನ್ನತ ಗುರಿಯನ್ನು ಇಟ್ಟುಕೊಳ್ಳಬೇಕು. 100/100 ಅಂಕಗಳನ್ನು ಪಡೆಯಲು ಪ್ರಯತ್ನ ನಡೆಸಬೇಕು. ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಗುರಿಯಿಂದ ವಿಚಲಿತರಾಗದೇ, ಪೋಷಕರು ಮತ್ತು ಗುರುಗಳಿಗೆ ಗೌರವ ನೀಡುತ್ತಾ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ, ಯೋಗ ಮುಂತಾದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಕೀಳರಿಮೆ ಬಿಟ್ಟು ಅವಕಾಶಗಳನ್ನು ಸದಾ ಸದುಪಯೋಗಪಡಿಸಿಕೊಳ್ಳಬೇಕು, ಮಾನವೀಯ ಗುಣಗಳನ್ನು ಅಳವಡಿಕೊಳ್ಳಬೇಕು ಎಂದರು.ಜೂನಿಯರ್ ಜೇಸಿ ಮಾಜಿ ಅಧ್ಯಕ್ಷೆ ಪ್ರಾರ್ಥನಾ ಅಂಗಾಂಗ ದಾನ ಮಾಡುವುದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಸಿಸ್ಟರ್ ರೀಟಾ ಉದ್ಘಾಟಿಸಿದರು. ಜೇಸಿಐ ಮೂಡಿಗೆರೆ ಅಧ್ಯಕ್ಷ ಸುಪ್ರೀತ್ ಕಾರಬೈಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿಜೇಸಿ ಕಾರ್ಯದರ್ಶಿ ಶೃತಿ ದೀಕ್ಷಿತ್ ಉಪಸ್ಥಿತರಿದ್ದರು.