ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ನಿರ್ದೇಶಕರು ಶ್ರಮಿಸಬೇಕು: ಘೋರ್ಪಡೆ

| Published : Jan 03 2024, 01:45 AM IST

ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ನಿರ್ದೇಶಕರು ಶ್ರಮಿಸಬೇಕು: ಘೋರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ತಿನ ಸಹಕಾರಿ ಸಂಘಗಳಿಗೆ ಆಯ್ಕೆಯಾಗುವ ನಿರ್ದೇಶಕರು ಸಹಕಾರಿ ಸಂಘಗಳಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ಸಿಗುವ ಸಾಲದ ಕುರಿತು ಮಾಹಿತಿ ನೀಡುವ ಮೂಲಕ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವರಾಜ ಘೋರ್ಪಡೆ ಹೇಳಿದರು.

ಗಜೇಂದ್ರಗಡ: ಪತ್ತಿನ ಸಹಕಾರಿ ಸಂಘಗಳಿಗೆ ಆಯ್ಕೆಯಾಗುವ ನಿರ್ದೇಶಕರು ಸಹಕಾರಿ ಸಂಘಗಳಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ಸಿಗುವ ಸಾಲದ ಕುರಿತು ಮಾಹಿತಿ ನೀಡುವ ಮೂಲಕ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವರಾಜ ಘೋರ್ಪಡೆ ಹೇಳಿದರು.ಸ್ಥಳೀಯ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ನಡೆದ ಹೊಸ ಬೆಳಕು-೨೦೨೪ರ ಹೊಸ ಸಾಲ ವಿತರಣೆ ಹಾಗೂ ಠೇವಣಾತಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಹಾಗೂ ಗ್ರಾಹಕರಿಗೆ ಸಹಕಾರಿ ಸಂಘಗಳಲ್ಲಿ ಸಿಗುವ ಸಾಲದ ಸೌಲಭ್ಯ ಮತ್ತು ಠೇವಣಿಯಿಂದಾಗುವ ಲಾಭ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಿದೆ. ಹೀಗಾಗಿ ಕೃಷಿ ಪತ್ತಿನ ಸಂಘಗಳ ನಿರ್ದೇಶಕರು ತಮ್ಮ ಗ್ರಾಮಗಳಲ್ಲಿ ಕನಿಷ್ಠ ೩ ತಿಂಗಳಿಗೊಮ್ಮೆ ಸಹಕಾರಿ ಬ್ಯಾಂಕ್‌ಗಳಲ್ಲಿ ಸರ್ಕಾರದಿಂದ ರೈತರಿಗೆ ಸಿಗುವ ಸಾಲ ಸೌಲಭ್ಯ ಮತ್ತು ಇತರ ಸೇವೆಗಳ ಬಗ್ಗೆ ತಿಳಿಸಬೇಕಿದೆ. ಆದರೆ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಆಯ್ಕೆಯಾಗುವ ಕೆಲ ನಿರ್ದೇಶಕರಿಗೆ ಬ್ಯಾಂಕ್‌ಗಳಲ್ಲಿ ರೈತರಿಗೆ ಸಿಗುವ ಸಾಲದ ಬಗ್ಗೆಯೇ ಮಾಹಿತಿ ಇರುವದಿಲ್ಲ. ಪರಿಣಾಮ ಬ್ಯಾಂಕ್‌ನಿಂದ ಸಿಗುವ ಸೌಲಭ್ಯಗಳಿಂದ ರೈತರು ವಂಚಿತವಾಗುತ್ತಿದ್ದಾರೆ ಎಂದ ಬೇಸರ ವ್ಯಕ್ತಪಡಿಸಿದ ಅವರು, ಸಹಕಾರಿ ಸಂಘಗಳಲ್ಲಿ ರೈತರಿಗೆ ಎಕರೆಗೆ ಕನಿಷ್ಠ ರು. ೭೦ ಸಾವಿರ ಸಾಲ ನೀಡಲು ಸಹಕಾರಿ ಸಂಘಗಳ ಬ್ಯಾಂಕ್‌ಗಳು ಮುಂದಾಗಬೇಕು. ಇಲ್ಲದಿದ್ದರೆ ೩೦ರಿಂದ ೪೦ ಸಾವಿರ ರುಪಾಯಿಗೆ ಏಕೆ ಜಮೀನಿನ ಉತಾರಗಳನ್ನು ನೀಡಿ ಕೈಕಟ್ಟಿಸಿಕೊಳ್ಳಬೇಕು ಎಂದು ರೈತರು ರಾಷ್ಟ್ರಕೃತ ಬ್ಯಾಂಕ್‌ಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರೈತರಿಗೆ ನೀಡುವ ಸಾಲದ ಪ್ರಮಾಣದ ಮೊತ್ತವನ್ನು ಹೆಚ್ಚಿಸುವ ರೈತರಿಗೆ ನೆರವಾಗಲು ಬ್ಯಾಂಕ್‌ಗಳು ಮುಂದಾಗಬೇಕು ಎಂದರು.

ಶಾಖೆಯ ವ್ಯವಸ್ಥಾಪಕ ಎಂ.ಬಿ. ಚಳಗೇರಿ ಮಾತನಾಡಿ, ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡಿದ್ದೇವೆ ಎನ್ನುವ ಭರವಸೆಯಿದೆ. ಹೀಗಾಗಿ ಬ್ಯಾಂಕಿಗೆ ಬರುವ ಗ್ರಾಹಕರಿಗೆ ತ್ವರಿತ ಸೇವೆ ಜತೆಗೆ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲಗಳಾದ ಹೌಸಿಂಗ್ ಲೋನ್, ಬಂಗಾರದ ಮೇಲೆ ಸಾಲ, ಠೇವಣಿಗಳಿಗೆ ನೀಡುವ ಬಡ್ಡಿ ಕುರಿತು ವಿಸ್ತೃತವಾಗಿ ಮಾಹಿತಿಯನ್ನು ನೀಡುವ ಮೂಲಕ ಜನಸ್ನೇಹಿ, ರೈತಸ್ನೇಹಿಯಾಗಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ ಬ್ಯಾಂಕ್ ಮತ್ತಷ್ಟು ತ್ವರಿತ ಸೇವೆಯನ್ನು ನೀಡಲು ಉತ್ಸುಕವಾಗಿದೆ ಎಂದರು.

ಈ ವೇಳೆ ಬ್ಯಾಂಕ್‌ನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಗ್ರಾಹಕರಿಗೆ ವಿತರಣೆ ಜತೆಗೆ ಬ್ಯಾಂಕಿನ ಕ್ಯೂಆರ್ ಕೋಡ್ ಬಿಡುಗಡೆಗೊಳಿಸಲಾಯಿತು.

ರಾಂಪೂರ ಪ್ರಾಕೃಪಸ ಸಂಘದ ಅಧ್ಯಕ್ಷ ದೊಡ್ಡನಗೌಡ ಗೌಡರ, ಕುಂಟೋಜಿ ಪ್ರಾಕೃಪಸ ಸಂಘದ ಮಾಬುಸಾಬ ಮಕಾನದಾರ, ರೋಣ ಬ್ಯಾಂಕ್ ನಿರೀಕ್ಷಕ ಎ.ಎ. ಶಾಬಾದಿ, ರಾಘವೇಂದ್ರ ಹೋಳಗಿ, ಅಮರಯ್ಯ ಗೌರಿಮಠ, ಬೀಮಣ್ಣ ತಳವಾರ, ಅಶೋಕ ಚಲವಾದಿ, ಶರಣಪ್ಪ ಗುಡೂರ, ಪರಸಪ್ಪ ನಿಂಬೋಜಿ, ರೇಣುಕಪ್ಪ ಇಂಗಳೆ ಸೇರಿ ಕೆಸಿಸಿ ಬ್ಯಾಂಕಿನ ಸಿಬ್ಬಂದಿ ಇದ್ದರು.