ಸಾರಾಂಶ
ನಾವು ರಾಮಮಂದಿರದ ಪರವಾಗಿದ್ದೇವೆ. ಆದರೆ ರಾಜಕೀಯ ದ್ವೇಷವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ಶಾಸಕ ಪೊನ್ನಣ್ಣ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಾವು ರಾಮಮಂದಿರದ ಪರವಾಗಿದ್ದೇವೆ. ಮುಖ್ಯಮಂತ್ರಿಯವರ ಅದನ್ನೇ ಹೇಳಿದ್ದಾರೆ, ನಾನು ಅದನ್ನೇ ಹೇಳುತ್ತಿದ್ದೇನೆ. ರಾಮಮಂದಿರ ಉದ್ಘಾಟನೆಗೆ ಶುಭವಾಗಲಿ. ಆದರೆ ರಾಜಕೀಯ ದ್ವೇಷವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ. ಕಾನೂನು ಬೇರೆ, ರಾಜಕೀಯವೇ ಬೇರೆ. ನಾಲ್ಕು ವರ್ಷ ಇವರು ಆಡಳಿತ ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ ಎಂದು ಆರೋಪಿಸಿದರು.
ಅಯೋಧ್ಯೆ ಗಲಭೆ ಬಳಿಕ ಈ ಪ್ರಕರಣಗಳ ರಿವ್ಯೂ ನಡೆದಿರಲಿಲ್ಲ. ಹೀಗಾಗಿ 31 ವರ್ಷಗಳಿಂದ ಇದ್ದ ಪ್ರಕರಣಗಳನ್ನು ಮುಗಿಸಬೇಕು. ಅದಕ್ಕೆ ಚಾರ್ಜ್ ಶೀಟ್ ಹಾಕಬೇಕಲ್ಲ. ಅದಕ್ಕೋಸ್ಕರ ಪ್ರಕರಣ ರಿವ್ಯೂ ಆದಾಗ ಈ ಪ್ರಕರಣಗಳು ಬಂದಿವೆ ಹೊರತು ಕರ ಸೇವಕರನ್ನು ಬಂಧಿಸಬೇಕು ಅಂತ ಯಾರೂ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಪೊನ್ನಣ್ಣ ಸಮರ್ಥಿಸಿರು. ಹಳೇ ಪ್ರಕರಣಗಳನ್ನು ಮುಗಿಸುವುದಕ್ಕೆ ಕೋರ್ಟ್ ನಿರ್ದೇಶನವೇ ಇದೆ. ಹೀಗಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ನ್ಯಾಯಾಲಯ ಅವರನ್ನು ಬಿಡುತ್ತದೆ. ಏನೂ ಆಗಲ್ಲ. ಪ್ರಕರಣಕ್ಕೆ ಒಂದು ಅಂತ್ಯ ಕಾಣಿಸಬೇಕಲ್ಲ. ಆ ಕೆಲಸವನ್ನು ಮಾಡುತ್ತಿದ್ದಾರೆ ಅಷ್ಟೇ ಎಂದರು.ಯಾರೋ ನಾಲ್ಕು ಜನ ಕರಸೇವಕರನ್ನು ಬಂಧಿಸಿದ ಕೂಡಲೇ ಏನೂ ಆಗಲ್ಲ. ಅಷ್ಟಕ್ಕೂ ನಾವು ರಾಮಮಂದಿರದ ಪರವಾಗಿಯೇ ಇದ್ದೇವೆ. ಕಾನೂನು ಪ್ರಕ್ರಿಯೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದರು. ಬಿಜೆಪಿಯವರು ಇಡಿ, ಸಿಬಿಐ, ಐಟಿಯವರನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದು ದ್ವೇಷದ ರಾಜಕಾರಣ ಎಂದರು.