ಕಿರಿಯ ವಕೀಲ ಶಿವರಾಜೇಂದ್ರ ಪಟೇಲ್ ಬಾಲ್ಯವಿವಾಹ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ಕಾನೂನುಬಾಹಿರ ಎಂದು ತಿಳಿಸಿ, ಇಂತಹ ಪ್ರಕರಣಗಳಲ್ಲಿ ಸೆರೆವಾಸ ಹಾಗೂ ದಂಡ ವಿಧಿಸುವ ವ್ಯವಸ್ಥೆ ಇರುವುದಾಗಿ ವಿವರಿಸಿದರು.

ಅರಸೀಕೆರೆ: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ತಾಂತ್ರಿಕ ಜ್ಞಾನಕ್ಕೆ ಸೀಮಿತವಾಗದೇ, ಸಂವಿಧಾನಾತ್ಮಕ ಕಾನೂನುಗಳ ಅರಿವನ್ನೂ ಹೊಂದಬೇಕು. ಇದರಿಂದ ಸಮಾಜದಲ್ಲಿ ಜವಾಬ್ದಾರಿಯುತ ಹಾಗೂ ಜಾಗೃತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಭಾನುಪ್ರಕಾಶ್ ಹೇಳಿದರು.

ನಗರದ ಹೊರವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವರದಕ್ಷಿಣೆ ಕಾಯ್ದೆ ಮತ್ತು ಬಾಲ್ಯವಿವಾಹ’ ಹಾಗೂ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಯಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾನೂನು ಅರಿವು ವಿದ್ಯಾರ್ಥಿಗಳ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಪ್ರಾರಂಭಿಕ ಹಂತದಲ್ಲೇ ಇದನ್ನು ತಿಳಿದುಕೊಂಡರೆ ಜೀವನದಲ್ಲಿ ತಪ್ಪುಗಳಿಂದ ದೂರ ಉಳಿಯಲು ಸಾಧ್ಯ ಎಂದು ಹೇಳಿದರು.

ಕಿರಿಯ ವಕೀಲ ಶಿವರಾಜೇಂದ್ರ ಪಟೇಲ್ ಬಾಲ್ಯವಿವಾಹ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ಕಾನೂನುಬಾಹಿರ ಎಂದು ತಿಳಿಸಿ, ಇಂತಹ ಪ್ರಕರಣಗಳಲ್ಲಿ ಸೆರೆವಾಸ ಹಾಗೂ ದಂಡ ವಿಧಿಸುವ ವ್ಯವಸ್ಥೆ ಇರುವುದಾಗಿ ವಿವರಿಸಿದರು.

ಬಾಲ್ಯವಿವಾಹ ಅಥವಾ ಅದರ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಬಹಿರಂಗಪಡಿಸಲ್ಲ, ತಪ್ಪಿತಸ್ಥರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲಾಗುವುದು, ಅಪ್ರಾಪ್ತ ಹೆಣ್ಣು ಮಗಳು ಗರ್ಭಿಣಿಯಾದರೆ ಫೋಕ್ಸೋ ಕಾಯ್ದೆ ಅನ್ವಯಿಸುವುದಾಗಿ ಹೇಳಿದರು.

ಯುವ ವಕೀಲ ಅತೀಶ್ ಮಾತನಾಡಿ, ಹೆಣ್ಣುಮಕ್ಕಳ ಸ್ವಾವಲಂಬನೆ, ಕೌಟುಂಬಿಕ ಭದ್ರತೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಗಳ ಮಹತ್ವ ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆ ಎಎಸ್ಐ ಧನಪಾಲ್ ನಾಯಕ್ ಕಾನೂನು ಹಾಗೂ ಪೊಲೀಸ್ ಇಲಾಖೆಯ ಪಾತ್ರದ ಕುರಿತು ಮಾಹಿತಿ ನೀಡಿದರು. ವಕೀಲರಾದ ಜಿ.ಆರ್. ವಿರೂಪಾಕ್ಷ, ಎಸ್.ಜಿ. ಚಿತ್ರೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮ ಸಂಯೋಜಕಿ ಪ್ರಿಯಾಂಕ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.