ಕನ್ನಡಪ್ರಭ ವಾರ್ತೆ ಮಂಡ್ಯ
ಕ್ಷಣಿಕ ಸುಖಕ್ಕೆ ಆಸೆ ಪಡದೆ ಉನ್ನತ ಶಿಕ್ಷಣ ಪಡೆದು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಗರದ ಗಾಂಭವನದಲ್ಲಿ ಬಿ.ಎಸ್.ಎಸ್.ಸೊನಾಟಾ ಮೈಕ್ರೋ ಕ್ರೆಡಿಟ್ ವತಿಯಿಂದ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ಗೋಲ್ಡನ್ ಲೈಫ್ ಎಂದು ಕರೆಯುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ಎಲ್ಲ ಸೌಲಭ್ಯ, ಸವಲತ್ತು ಸದ್ಬಳಕೆ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವೂ ಸ್ಪರ್ಧೆಗೆ ತೆರೆದುಕೊಳ್ಳುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಸಜ್ಜಾಗಬೇಕು. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಅತಿಯಾಗಿ ಬಳಸದೆ, ಹಿತ ಮಿತವಾಗಿ ಬಳಸಿ ವಿಷಯವನ್ನು ಗ್ರಹಿಸುವುದರೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.
ಸಂಸ್ಥೆಯ ಮುಖ್ಯ ಆಡಳಿತಾಕಾರಿ ಎಸ್.ಪಂಚಾಕ್ಷರಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಚಂದ್ರಕಾಂತ್, ಸಂಸ್ಥೆ ರಾಜ್ಯ ಮುಖ್ಯಸ್ಥ ಜಗದೀಶ್, ಸಿಎಸ್‌ಆರ್ ಮುಖ್ಯಸ್ಥ ಪಂಡಿತ್ ಜಿ. ಪಾಟೀಲ್, ಪ್ರಾದೇಶಿಕ ವ್ಯವಸ್ಥಾಪಕ ಬಿ.ಸಿ.ಗಣೇಶ್, ಸಹಾಯಕ ವ್ಯವಸ್ಥಾಪಕ ಪ್ರಶಾಂತ್‌ಕುಮಾರ್, ಕ್ಷೇತ್ರ ವ್ಯವಸ್ಥಾಪಕ ರಂಗರಾಜು, ತರಬೇತುದಾರ ಶೇಖರ್ ಇದ್ದರು.