ಸಾರಾಂಶ
ಶಿರಹಟ್ಟಿ: ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು, ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ಮಂಗಳವಾರ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಹಟ್ಟಿ- ೨೦೨೪-೨೫ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಸಮಾರಂಭ ಹಾಗೂ ಸಂವಿಧಾನ ದಿನದ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ನನಸು ಮಾಡಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದಲ್ಲಿ ತೊಡಗಿರಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಹಾಗೂ ದೃಢವಾದ ಸತತ ಪ್ರಯತ್ನ ಎಂಬ ನಾಲ್ಕು ಅಂಶ ಅಳವಡಿಸಿಕೊಂಡು ಸಾಗಿದಲ್ಲಿ ಕಂಡ ಕನಸು ನನಸಾಗಿಸಲು ಸಾಧ್ಯ ಎಂದರು.
ಜೀವನದಲ್ಲಿ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವತ್ತ ಗಮನಹರಿಸಬೇಕು. ನಿಮ್ಮ ಸಾಧನೆಗೆ ದೇಶ ಕಾಯುತ್ತಿದೆ ಎಂದ ಅವರು, ಉತ್ತಮ ಗುಣ ರೂಢಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು. ಸ್ವಾತಂತ್ರ್ಯಕ್ಕೂ ಪೂರ್ವ ನಮ್ಮಲ್ಲಿ ತಂತ್ರಜ್ಞಾನದ ಉಪಕರಣಗಳ ಲಭ್ಯವಿರಲಿಲ್ಲ. ಇದೀಗ ಭಾಹ್ಯಾಕಾಶ, ರಕ್ಷಣಾ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಶ್ರದ್ದೆ, ಶ್ರಮ, ನಿರಂತರತೆ ಇದ್ದರೆ ಗುರಿ ಮುಟ್ಟಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜು ಮಟ್ಟದಿಂದಲೇ ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.
ಇಂದು ಶಿಕ್ಷಣವು ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ತಲುಪಿದೆ. ಇದರ ಪರಿಣಾಮ ಪ್ರತಿಯೊಂದು ಕ್ಷೇತ್ರದಲ್ಲಿಯೂ ತೀವ್ರ ಸ್ಪರ್ಧೆ ಏರ್ಪಡುವುದರ ಜತೆಗೆ ಕೌಶಲ್ಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ದೊರೆತಿದೆ. ಕಾಲೇಜು ವಿದ್ಯಾರ್ಥಿಗಳು ಉನ್ನತ ವಿಚಾರ ಇಟ್ಟುಕೊಂಡು ಭವಿಷ್ಯದ ಸ್ಪರ್ಧೆ ಎದುರಿಸಲು ಈಗಲೇ ಸಿದ್ಧತೆ ನಡೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.ಪ್ರಾಧ್ಯಾಪಕ ಬಾಹುಬಲಿ ಜೈನರ ಮಾತನಾಡಿ, ವಿದ್ಯಾರ್ಥಿಗಳು ಯಾವತ್ತೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಎಂತಹ ಹುದ್ದೆಯನ್ನಾದರೂ ಪಡೆಯಬಹುದು. ನಿರಂತರ ಗುರುಗಳ ಮಾರ್ಗದರ್ಶನ ಹಾಗೂ ಕಠಿಣ ಅಭ್ಯಾಸದಿಂದ ನಿರೀಕ್ಷಿತ ಗುರಿ ಸಾಧಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನ ನಿರ್ಧರಿಸಿಕೊಳ್ಳಲು ಪ್ರಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಸಾಧನೆ ಮಾಡಲು ಸಾಧ್ಯ. ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ ಎಂದರು.ಶಿಕ್ಷಣದಿಂದ ಮಾತ್ರ ಜೀವನಕ್ಕೆ ಬೆಲೆ ಸಿಗೋದಿಲ್ಲ. ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿಯ ಕುರಿತು ಮಾರ್ಗದರ್ಶನದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯವಾಗಿದೆ. ಜತೆಗೆ ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲ ರಂಗದಲ್ಲಿಯೂ ನಾವು ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ, ಎಚ್.ಡಿ. ಮಾಗಡಿ, ಡಿ.ಕೆ. ಹೊನ್ನಪ್ಪನವರ ಮಾತನಾಡಿದರು. ಚಂದ್ರಕಾಂತ ನೂರಶೆಟ್ಟರ್, ಕೆ.ಎ. ಬಳಿಗೇರ, ಡಾ. ಸುನೀಲ ಬುರಬುರೆ, ಡಾ. ಪವನ ಪಾಯಿದೆ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ಅಜ್ಜು ಪಾಟೀಲ, ಅಶೋಕ ವರವಿ, ಗೂಳಪ್ಪ ಕರಿಗಾರ, ಗೀತಾ ಹಲಸೂರ, ನಂದಾ ಕಪ್ಪತ್ತನವರ, ಎಚ್.ಎಂ. ದೇವಗೀರಿ, ನಂದಾ ಪಲ್ಲೇದ ಇತರರು ಇದ್ದರು.