ಬಳ್ಳಾರಿ: ಸನ್ಮಾರ್ಗ ಗೆಳೆಯರ ಬಳಗ ಹಾಗೂ ಉದಯಪುರದ ನಾರಾಯಣ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಕ್ಲಾಸಿಕ್ ಫಂಕ್ಷನ್ ಸಭಾಂಗಣದಲ್ಲಿ ಉಚಿತ ಕೃತಕ ಕೈ-ಕಾಲು ಮಾಪನದ ಬೃಹತ್ ಶಿಬಿರ ಯಶಸ್ವಿಯಾಗಿ ನಡೆಯಿತು.

ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಕ್ಕೂ ಅಧಿಕ ಅಂಗವೈಕಲ್ಯ ಹೊಂದಿರುವವರು ಶಿಬಿರದಲ್ಲಿ ಕೃತಕ ಕೈ-ಕಾಲುಗಳ ಮಾಪನ ಸೇರಿದಂತೆ ಅಗತ್ಯ ಸೇವೆಗಳ ಪ್ರಯೋಜನ ಪಡೆದರು. ಆರ್ಥಿಕವಾಗಿ ಹಿಂದುಳಿದ ಹಾಗೂ ಕೃತಕ ಅಂಗಗಳ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಿದ್ದ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆಯಿತು.

ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಶಿಬಿರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಆತ್ಮವಿಶ್ವಾಸ ತುಂಬುವ ಹಾಗೂ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಇಂತಹ ಸೇವಾ ಕಾರ್ಯ ಸಮಾಜಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಬಳ್ಳಾರಿ ವಲಯದ ಐಜಿಪಿ ಹರ್ಷಾ ಪ್ರಸಾದ್ ಗೋಖಲೆ ಸೇರಿದಂತೆ ನಗರದ ವಿವಿಧ ಕ್ಷೇತ್ರಗಳ ಗಣ್ಯರು ಶಿಬಿರಕ್ಕೆ ಆಗಮಿಸಿ ಆಯೋಜಕರಿಗೆ ಶುಭ ಹಾರೈಸಿದರು.

ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಗೋವಾ ಹಾಗೂ ಅಸ್ಸಾಂ ರಾಜ್ಯಗಳಿಂದಲೂ ವಿಕಲಚೇತನರು ಶಿಬಿರಕ್ಕೆ ಆಗಮಿಸಿದ್ದರು. ವಿಶೇಷವಾಗಿ ಬಳ್ಳಾರಿ ಕೇಂದ್ರ ಕಾರಾಗೃಹದ ಮೂವರು ಕೈದಿಗಳೂ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅಗತ್ಯವಿರುವವರಿಗೆ ಕೃತಕ ಕೈ-ಕಾಲುಗಳನ್ನು ಒದಗಿಸುವ ಮೊದಲ ಹಂತವಾಗಿ ಮಾಪನ ಕೈಗೊಳ್ಳಲಾಯಿತು. ಶಿಬಿರಕ್ಕೆ ದೂರದ ಊರುಗಳಿಂದ ಆಗಮಿಸಿದ್ದ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸಂಘಟಕರು ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.


ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್, ಉಪಾಧ್ಯಕ್ಷ ಹನುಮಂತ ರೆಡ್ಡಿ ಕೊರ್ಲಗುಂದಿ, ಜಗದೀಶ್ ಮಸೀದಿಪುರ ಸೇರಿದಂತೆ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.

ಕಳೆದ 12 ವರ್ಷಗಳಿಂದ ವಿವಿಧ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸನ್ಮಾರ್ಗ ಗೆಳೆಯರ ಬಳಗ ವಿಕಲಚೇತನರಿಗೆ ಅನುಕೂಲಕ್ಕಾಗಿ ಕೃತಕ ಕೈ-ಕಾಲು ಜೋಡಣೆ ಶಿಬಿರ ಆಯೋಜನೆ ಮಾಡಿದ್ದು, ಶಿಬಿರದ ಯಶಸ್ವಿಗೆ ಸನ್ಮಾರ್ಗದ ಸದಸ್ಯರು ಹಾಗೂ ನಾರಾಯಣ ಸೇವಾ ಸಂಸ್ಥೆಯ ಪದಾಧಿಕಾರಿಗಳು ಕೈ ಜೋಡಿಸಿದರು. ಇದರಿಂದ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಶಿಬಿರವನ್ನು ಯಶಸ್ವಿಗೊಳಿಸಲು ಸಾಧ್ಯವಾಯಿತು ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ತಿಳಿಸಿದರು.