ಕನ್ನಡಪ್ರಭ ವಾರ್ತೆ ಚಿತ್ರದುರ್ಗ

‘ಕೆಲ ವಿಷಯಗಳನ್ನು ಮುಚ್ಚಿಡಲಾಗಿದೆ. ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಟ್ಟಿದ್ದಾರೋ?. ಯಾವ ಕಾರಣಕ್ಕೆ ಮುಂದೂಡುತ್ತಿದ್ದಾರೆ?. ಇಂತಹ ವಿಚಾರಗಳನ್ನು ನಾನು ಚರ್ಚೆ ಮಾಡುವುದಿಲ್ಲ. ಇತಿಹಾಸದಲ್ಲಿ ಇವನ್ನೆಲ್ಲಾ ನೋಡಿದ್ದೇವೆ’. ಸಚಿವ ಡಿ.ಸುಧಾಕರ್ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಯಿದು.

ಭಾನುವಾರ ಶಾಸಕ ಎಂ.ಚಂದ್ರಪ್ಪನವರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಡಿ.ಸುಧಾಕರ್ ಅವರ ಅನಾರೋಗ್ಯ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಎಚ್ಡಿಕೆ, ‘ಇಂತಹ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರು ಸಾವು, ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಒಳಗೆ ಏನು ನಡೆಯುತ್ತಿದೆ ಅನ್ನೋದನ್ನು ನೋಡಬೇಕು. ಪಾಪ, ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ಯಾವ ಕಾರಣಕ್ಕೆ ಕೆಲ ವಿಷಯ ಮುಚ್ಚಿಟ್ಟಿದ್ದಾರೆ?. ಕೆಲ ವ್ಯಕ್ತಿಗಳು ಇಂತಹ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಲು ಎಕ್ಸ್‌ಫರ್ಟ್ ಇರ್ತಾರೆ’ ಎಂದರು.