ಮುಧೋಳ ತಾಲೂಕಿನ 7 ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಸುಮಾರು 144 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, 45 ರೈತ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

​ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ತಾಲೂಕಿನ 7 ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಸುಮಾರು 144 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, 45 ರೈತ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ವಿದ್ಯುತ್ ಅವಘಡದಿಂದ ಸುಟ್ಟಿರುವ ಕಬ್ಬಿನ ತೋಟಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ, ಸಕ್ಕರೆ ಕಾರ್ಖಾನೆಗಳ ಹಾಗೂ ರೈತರ ತುರ್ತು ಸಭೆ ನಡೆಸಿ, ರೈತರಿಗೆ ತಕ್ಷಣವೇ ಪರಿಹಾರ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಕಬ್ಬು ಹಾನಿಯ ವಿವರ: ವಿದ್ಯುತ್ ಲೈನ್‌ದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವುದು ತಿಳಿದು ಬಂದಿದೆ. ತಾಲೂಕಿನ ಒಟ್ಟು 7 ಗ್ರಾಮಗಳ ಸೇರಿ 144 ಎಕರೆ 11 ಗುಂಟೆ ಪ್ರದೇಶದಲ್ಲಿನ ಕಬ್ಬು ನಾಶವಾಗಿದೆ, ​ಜುಂಝರಕೊಪ್ಪ (ರೂಗಿ) 111.14 ಎಕರೆ (ಅತಿ ಹೆಚ್ಚು ಹಾನಿ), ​ಮಳಲಿ-9.36 ಎಕರೆ, ​ನಾಗರಾಳ 9.5 ಎಕರೆ, ​ಬೆಳಗಲಿ 5.20 ಎಕರೆ, ​ದಾದನಟ್ಟಿ 5 ಎಕರೆ, ​ಚಿಂಚಖಂಡಿ ಬಿ.ಕೆ 1.28 ಎಕರೆ ಸೇರಿ 144.11 ಎಕರೆ ಕಟಾವಿಗೆ ಬಂದಿದ್ದ ಕಬ್ಬು ಹಾನಿಯಾಗಿದೆ.

​ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಘಟನೆಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಆರ್.ಬಿ. ತಿಮ್ಮಾಪೂರ, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತಹಸೀಲ್ದಾರ್ ವರದಿ, ಪೊಲೀಸ್ ಇಲಾಖೆಯ ಎಫ್‌ಐಆರ್, ವಿದ್ಯುತ್ ಪರಿವೀಕ್ಷಕರ ವರದಿ ಹಾಗೂ ಎಪಿಎಂಸಿ ದೃಢೀಕರಣ ಪತ್ರಗಳನ್ನು ಶೀಘ್ರವಾಗಿ ಸಿದ್ಧಪಡಿಸಬೇಕು. ಈ ಎಲ್ಲ ಪ್ರಕ್ರಿಯೆಗಳ ಜವಾಬ್ದಾರಿಯನ್ನು ಕೃಷಿ ಇಲಾಖೆಯವರು ವಹಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

​ಕಾರ್ಖಾನೆ ಮಾಲೀಕರಿಗೆ 15 ದಿನ ಗಡುವು: ವಿದ್ಯುತ್ ಅವಘಡದಿಂದ ಹಾನಿಯಾಗಿರುವ ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ಶೇ.25ರಷ್ಟು ಹಣ ಕಡಿತಗೊಳಿಸುವುದು ಸಾಮಾನ್ಯ. ಆದರೆ ಸಂಕಷ್ಟದಲ್ಲಿರುವ ರೈತರಿಗೆ ಮಾನವೀಯತೆಯ ದೃಷ್ಟಿಯಿಂದ ಪೂರ್ಣ ಪ್ರಮಾಣದ ಹಣವನ್ನು 15 ದಿನಗಳ ಒಳಗಾಗಿ ಪಾವತಿಸಬೇಕೆಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ರೈತರ ಪರವಾಗಿ ಮನವಿ ಸಚಿವ ತಿಮ್ಮಾಪೂರ ಅವರು, ಶೀಘ್ರದಲ್ಲೇ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

​ಸಮರೋಪಾದಿಯಲ್ಲಿ ಕಟಾವು ಕಾರ್ಯ:ಸುಟ್ಟಿರುವ ಕಬ್ಬು ಸಂಪೂರ್ಣ ಹಾಳಾಗುವ ಮುನ್ನ ಕಾರ್ಖಾನೆಗೆ ಸಾಗಿಸಲು 52 ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳನ್ನು ನಿಯೋಜಿಸಲಾಗಿದೆ, ​ನಿರಾಣಿ ಸಕ್ಕರೆ ಕಾರ್ಖಾನೆಯ 17 ಗ್ಯಾಂಗ್ ಗಳು, ಉತ್ತೂರಿನ ಇಂಡಿಯನ್ ಕೇನ್ ಪವರ್ ನ 16 ಗ್ಯಾಂಗ್‌ಗಳು, ​ಸಮೀರವಾಡಿ ಸಕ್ಕರೆ ಕಾರ್ಖಾನೆಯ 8 ಗ್ಯಾಂಗ್‌ಗಳು​, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ 8 ಗ್ಯಾಂಗ್‌ಗಳು, ​ರನ್ನ ಶುಗರ್ಸ್ ನ 3 ಗ್ಯಾಂಗ್‌ಗಳು ಒಟ್ಟು 52 ಗ್ಯಾಂಗ್ ಗಳು ಸುಟ್ಟಿರುವ ಕಬ್ಬು ಕಟಾವು ಮಾಡುತ್ತಿವೆ. ರೈತರ ಹಿತರಕ್ಷಣೆಗಾಗಿ ಸರ್ಕಾರ ಬದ್ಧವಾಗಿದ್ದು, ನಷ್ಟ ಅನುಭವಿಸಿದ ಪ್ರತಿಯೊಂದು ಕುಟುಂಬಕ್ಕೂ ನ್ಯಾಯ ಒದಗಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸಂಗಪ್ಪ, ಆಹಾರ ಮತ್ತು ನಾಗರಿಕ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕನವಾಡಿ, ತಹಸೀಲ್ದಾರ್ ಅನೀಲ ಬಡಿಗೇರ, ಹೆಸ್ಕಾಂ ಅಧಿಕಾರಿಗಳಾದ ದಡೂತಿ, ರವೀಂದ್ರ ಮೆಟಗುಡ್ಡ, ಗ್ರೇಡ್-2 ತಹಸೀಲ್ದಾರ್ ರಂಗನಗೌಡ ನಾಯಕ, ಕಂದಾಯ ಇಲಾಖೆಯ ವಲಯ ನಿರೀಕ್ಷಕ ಪ್ರಕಾಶ ಕುಂದರಗಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಹಾಗೂ ರೈತರು ಮತ್ತು ಕಾರ್ಖಾನೆಯ ಪ್ರತಿನಿಧಿಗಳು ಇತರರು ಉಪಸ್ಥಿತರಿದ್ದರು.