ಜೈ ಹಿಂದ್ ಎನ್ನುವುದು ಕೇವಲ ಒಂದು ಘೋಷವಾಕ್ಯವಲ್ಲ. ಬದಲಿಗೆ ಭಾರತೀಯರ ಪಾಲಿಗೆ ಅದೊಂದು ಸಂಗೀತ. ಈ ಸಂಗೀತವು ಒಂದು ಬಾರಿ ಎದೆ ಹೊಕ್ಕರೆ ಬದುಕಿನುದ್ದಕ್ಕೂ ಮರೆಯಾಗುವುದಿಲ್ಲ ಎಂದು ಮಾಜಿ ಬ್ರಿಗೇಡಿಯರ ರವಿ ಮುನಿಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೈ ಹಿಂದ್ ಎನ್ನುವುದು ಕೇವಲ ಒಂದು ಘೋಷವಾಕ್ಯವಲ್ಲ. ಬದಲಿಗೆ ಭಾರತೀಯರ ಪಾಲಿಗೆ ಅದೊಂದು ಸಂಗೀತ. ಈ ಸಂಗೀತವು ಒಂದು ಬಾರಿ ಎದೆ ಹೊಕ್ಕರೆ ಬದುಕಿನುದ್ದಕ್ಕೂ ಮರೆಯಾಗುವುದಿಲ್ಲ ಎಂದು ಮಾಜಿ ಬ್ರಿಗೇಡಿಯರ ರವಿ ಮುನಿಸ್ವಾಮಿ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವದೇಶಿ ಬಳಸಿ ದೇಶ ಉಳಿಸಿ ಆಂದೋಲನಕ್ಕಾಗಿ 3500 ಕಿ.ಮೀ ಸೈಕಲ್ ಸವಾರಿ ಮಾಡಿಕೊಂಡು ಬಂದ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 1947ರಲ್ಲಿ ಸಾವಿರಾರು ಜನ ಹೋರಾಟ ಮಾಡುವ ಮೂಲಕ ದೇಶವನ್ನು ಉಳಿಸಿದ್ದೇವೆ. ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಬಿಡುಗಡೆಗೊಳಿಸಿದ್ದೇವೆ. ಆದರೆ ಇಂದು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಅಂದು ಉಳಿಸಿದ ದೇಶವನ್ನು ಇಂದು ಬೆಳೆಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ದೇಶ ಅಭಿವೃದ್ಧಿಯು ಉನ್ನತ ಶಿಖರಕ್ಕೇರಬೇಕಾದಲ್ಲಿ ಹಾಗೂ ವಿಶ್ವದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕಾದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದರು.

ನಿವೃತ್ತ ಕಮಾಂಡರ್ ನೀಲಕಂಠ ಮಾತಾನಡಿ, ಒಂದು ಕಾಲದಲ್ಲಿ ಭಾರತೀಯ ಸೇನೆಯು ಯುದ್ಧ ಸಾಮಗ್ರಿಗಳಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ ವಿದೇಶವನ್ನು ಅವಲಂಬಿಸಬೇಕಾಗುತ್ತಿತ್ತು. ಆದರೆ ಇಂದು ಆ ಸ್ಥಿತಿಇಲ್ಲ. ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಆತ್ಮನಿರ್ಭರ ಭಾರತದಿಂದಾಗಿ ಇಂದು ಸೇನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಅದೆಷ್ಟರ ಮಟ್ಟಿಗೆ ಎಂದರೆ ಇಂದು ನೌಕಾಪಡೆ ಸೇರಿದಂತೆ ಎಲ್ಲ ಪಡೆಗಳಲ್ಲಿಯೂ ಸ್ವದೇಶಿ ಉಪಕರಣಗಳು ರಾರಾಜಿಸುತ್ತಿವೆ ಎಂದರು.

ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವದೇಶಿ ಚಿಂತನೆ ಬೆಳೆಯುತ್ತಿದೆ. ಅದೇ ರೀತಿ ಕೃಷಿಯಲ್ಲಿಯೂ ಸಹ ಅದು ಮುಂದುವರೆಯುತ್ತಿದೆ. ಸಾವಯವ ಕೃಷಿ ಪದ್ಧತಿಯಿಂದಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.

ನಿಕಟಪೂರ್ವ ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಮುಖಂಡ ಚಂದ್ರಶೇಖರ ಕವಟಗಿ, ಮಾಜಿ ಸೇನಾಧಿಕಾರಿ ಕರ್ನಲ್ ಕಂದಸ್ವಾಮಿ, ಸುಬೇದಾರ ರಮೇಶ ಜಗತಾಪ ಸ್ವದೇಶಿ ಚಿಂತನೆಗಳ ಅರಿವು ಮೂಡಿಸಿದರು. ನಿವೃತ್ತ ಡೆಪ್ಯೂಟಿ ಕಮಿಷನರ್ ರಮೇಶ.ಡಿ, ವೇದಮೂರ್ತಿ, ಐ.ಟಿ.ಮ್ಯಾನೇಜರ್ ಶಾಂತಾ, ಎಸ್.ಪಿ ಬಿರಾದಾರ, ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು. ಪ್ರಾಂಶುಪಾಲ ಮಂಜುನಾಥ ಜುನಗೊಂಡ ವಂದಿಸಿದರು.