ಮುಕ್ಕೂರು ನೇಸರ ಯುವಕ ಮಂಡಲ 10ನೇ ವರ್ಷಾಚರಣೆ-ದಶಪ್ರಣತಿ ಪ್ರಯುಕ್ತ ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಕೆ ಎಲೆ ಚುಕ್ಕಿ ರೋಗ ನಿಯಂತ್ರಣ, ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ಅಡಕೆ ಎಲೆಚುಕ್ಕಿ ರೋಗ ಹಲವಾರು ವರ್ಷಗಳಿಂದ ಕಾಡುತ್ತಿದೆ. ಕೆಲ ವರ್ಷಗಳಿಂದ ವಾತಾವರಣದಲ್ಲಿನ ಬದಲಾವಣೆ ಸಹಿತ ನಾನಾ ಕಾರಣಗಳಿಂದ ಅದರ ತೀವ್ರತೆ ಹೆಚ್ಚಾಗಿದೆ. ರೋಗ ಹರಡಲು ಕಾರಣವಾಗಿರುವ ಶಿಲೀಂದ್ರಗಳ ಬೀಜಾಣುಗಳನ್ನು ನಾಶಪಡಿಸುವುದು, ಕೀಟ ನಾಶಕ ಸಿಂಪಡಣೆ ಮೂಲಕ ರೋಗ ನಿಯಂತ್ರಣ ಸಾಧ್ಯ ಎಂದು ವಿಟ್ಲ ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ. ನಾಗರಾಜ ಹೇಳಿದರು.ಮುಕ್ಕೂರು ನೇಸರ ಯುವಕ ಮಂಡಲ 10ನೇ ವರ್ಷಾಚರಣೆ-ದಶಪ್ರಣತಿ ಪ್ರಯುಕ್ತ ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಕೆ ಎಲೆ ಚುಕ್ಕಿ ರೋಗ ನಿಯಂತ್ರಣ, ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಡಕೆ ಮರಗಳ ಬೆಳವಣಿಗೆ ಕುಂಠಿತವಾಗುವ ಮೂಲಕ ಇದರ ರೋಗ ಲಕ್ಷಣವನ್ನು ಗಮನಿಸಬಹುದು. ರೋಗದ ತೀವ್ರತೆಯಿಂದ ಎಲೆಗಳು ಒಣಗಿ ಹೋಗುತ್ತಿದ್ದರೆ ಅವುಗಳನ್ನು ಕತ್ತರಿಸಿ, ಸುಟ್ಟು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಮಾತನಾಡಿ, ಅನುಭವವೇ ಕೃಷಿ ಕ್ಷೇತ್ರದ ಸಾಧನೆಗೆ ಮೂಲ. ಕೃಷಿಯಲ್ಲಿ ಸಣ್ಣ ಕೃಷಿಕ, ದೊಡ್ಡ ಕೃಷಿಕ ಎಂಬ ಅಂತರವಿಲ್ಲ. ಉತ್ತಮ ಕೃಷಿಯೇ ಎಲ್ಲರ ಗುರಿಯಾಗಿದ್ದು, ಸಮಗ್ರ ಕೃಷಿ ಪದ್ಧತಿಯಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯವಿದೆ. ಅಡಕೆ, ಕಾಳು ಮೆಣಸಿನ ಜೊತೆಗೆ ಬೊಳುವಾರು ಮಾವಿನ ತಳಿಯಿಂದಲೂ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ನಮ್ಮ ತಳಿಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು, ನಮ್ಮ ತಳಿಗಳ ಬಗ್ಗೆ ಇತರರಿಗೆ ತಿಳಿಸುವ ಕೆಲಸವಾಗಬೇಕು ಎಂದರು.ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್. ಯದುಕುಮಾರ್, ಪ್ರಗತಿಪರ ಕಾಫಿ ಕೃಷಿಕ ಚಂದ್ರಶೇಖರ ತಾಳ್ತಜೆ ಮಾತನಾಡಿದರು. ಭ್ಲೂಮ್ ಬಯೋಟೆಕ್ ಸಂಸ್ಥಾಪಕ ಸುಹಾಸ್ ಮೋಹನ್ ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ. ನರಸಿಂಹ ಶರ್ಮ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಮಾಜಿ ಸದಸ್ಯೆ ರಾಜೀವಿ ಆರ್. ರೈ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಸ್ವಾಗತಿಸಿದರು. ನೇಸರ ದಶಪ್ರಣತಿ ಸಮಿತಿ ಸದಸ್ಯ ಜೈನುದ್ದೀನ್ ತೋಟದಮೂಲೆ ವಂದಿಸಿದರು.

ಮೋಹನ ಬೈಪಡಿತ್ತಾಯ ಅವರ ತೋಟದಲ್ಲಿ ಕಾಫಿ ಗಿಡ ನೆಡಲಾಯಿತು. ಈ ಮೂಲಕ ಕಾರ್ಯಕ್ರಮದ ಸಮಾರೋಪ ನಡೆಯಿತು. ೧೦೦ಕ್ಕೂ ಅಧಿಕ ಮಂದಿ ಕೃಷಿಕರು ಪಾಲ್ಗೊಂಡಿದ್ದರು.