ಸಾರಾಂಶ
ಮುಳಗುಂದ: ಪಟ್ಟಣದ ಐತಿಹಾಸಿಕ ದೇವಸ್ಥಾನ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ಏ. ೯ರಂದು ಯುಗಾದಿ ಪಾಡ್ಯದಂದು ಸಂಜೆ ಸೂರ್ಯಾಸ್ತದ ಸಮಯದಲ್ಲಿ ದೇವಾಲಯದ ಮೂರು ಮಂಟಪಗಳನ್ನು ದಾಟಿ ಗರ್ಭಗುಡಿಯಲ್ಲಿರುವ ಸಿದ್ಧೇಶ್ವರ ಮೂರ್ತಿಯ ಮೇಲೆ ನೇರವಾಗಿ ಸೂರ್ಯ ರಶ್ಮಿ ಸ್ಪರ್ಶಿಸುವುದು ವಿಶೇಷವಾಗಿದೆ.ಯುಗಾದಿ ಪಾಡ್ಯ ದಿನದಂದೇ ಶ್ರೀ ಸಿದ್ಧೇಶ್ವರ ದೇವರ ರಥೋತ್ಸವ ಜರುಗಲಿದ್ದು, ಸೂರ್ಯ ರಶ್ಮಿಯು ಶ್ರೀ ಸಿದ್ಧೇಶ್ವರನ ಸ್ಪರ್ಶಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಂಜೆ ಸೂರ್ಯಾಸ್ತ ಸಮಯದಲ್ಲಿ ಸಾವಿರಾರು ಭಕ್ತ ಸಮೂಹ ಇಲ್ಲಿ ಸೇರಿರುತ್ತದೆ.
ಶರಣ ಸಂಸ್ಕೃತಿ ಪಾವನ ತಾಣ ಎಂದೇ ಹೆಸರುವಾಸಿಯಾದ ಮುಳಗುಂದ ಪಟ್ಟಣದಲ್ಲಿ ಸಿದ್ಧೇಶ್ವರ ದೇವಾಲಯ, ಅನ್ನದಾನೇಶ್ವರ ದೇವಾಲಯ, ನಗರೇಶ್ವರ ದೇವಾಲಯ, ಪಾರ್ಶ್ವನಾಥ ಹಾಗೂ ಚಂದ್ರನಾಥ ಬಸದಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ ಹಾಗೂ ದಾವಲ್ ಮಲ್ಲಿಕ ಪಹಾಡ್ ಇಲ್ಲಿನ ಐತಿಹಾಸಿಕ ಪರಂಪರೆಯನ್ನು ಶ್ರೀಮಂತಗೋಳಿಸಿವೆ.ಬೆಳ್ವೂಲ ಪ್ರದೇಶದ ವ್ಯಾಪ್ತಿಯ ಆಡಳಿತ ವಿಭಾಗದ ರಾಜಧಾನಿಯಾಗಿದ್ದ ಮುಳಗುಂದ ಪಟ್ಟಣ, ಶ್ರೀಮಂತ ಶಿಲ್ಪಕಲೆಯ ದೇವಾಲಯಗಳನ್ನು ಒಳಗೊಂಡಿದೆ. ಸಿದ್ಧೇಶ್ವರ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಪಟ್ಟಣದ ದಕ್ಷಿಣ ದಿಕ್ಕಿನ ಪ್ರದೇಶದ ಅಗಸಿ ಬಾಗಿಲಿನ ಹತ್ತಿರವಿರುವ ಈ ದೇವಾಲಯದ ಕಟ್ಟಡವು ಕಲಾ ಕುಸುರಿ ಕೆತ್ತನೆಯಿಂದ ಕೂಡಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದೇವಾಲಯದ ಒಳಗಡೆಯ ಮೂರು ಗರ್ಭಗುಡಿಯಲ್ಲಿಯೂ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಯುಗಾದಿ ಪಾಡ್ಯದಂದು ಜರುಗುವ ಜಾತ್ರಾ ಮಹೋತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಚನ ಸಂಗೀತ, ಕೃಷಿ, ರೈತರ ಕುರಿತು ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ, ಜಾತ್ರೆಗೆ ಆಗಮಿಸುವ ಭಕ್ತರಿಗೆ ಮಹಾ ದಾಸೋಹದಂತಹ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುತ್ತಿವೆ. ಮುಳಗುಂದ ಪಟ್ಟಣದ ಐತಿಹಾಸಿಕ ದೇವಾಲಯ ಇದಾಗಿದ್ದು, ಯುಗಾದಿ ದಿನದಂದು ಸೂರ್ಯ ರಶ್ಮಿ ಸಿದ್ಧೇಶ್ವರ ದೇವರ ಮೂರ್ತಿಗೆ ಬೀಳುವುದು ಇಲ್ಲಿಯ ವಿಶೇಷವಾಗಿದೆ. ಜಾತ್ರಾ ಮಹೋತ್ಸವದಲ್ಲಿ ಅನುಭಾವಗೋಷ್ಠಿ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪುರ ಹೇಳಿದರು.