ವಚನಗಳ ಮೂಲಕ ನಿಜದ ನೆಲೆಯಲ್ಲಿ ಅನುಭಾವ ತಿಳಿಸಿದ ಶರಣರು

| Published : Jun 10 2024, 12:46 AM IST

ಸಾರಾಂಶ

ಮಠ-ಮಾನ್ಯಗಳು ಮಾಡಬೇಕಾದ ಕೆಲಸವನ್ನು ಕಮ್ಮಟಗಳನ್ನು ಆಯೋಜಿಸುವ ಮೂಲಕ ಬಸವತತ್ವದ ಪ್ರಸಾರ ಕಾರ್ಯವನ್ನು ದಾವಣಗೆರೆಯ ಲಿಂ.ಶರಣೆ ಪುಟ್ಟಮ್ಮ ಮತ್ತು ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಇಳಕಲ್‌ನ ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ಹಾವೇರಿ: ವಚನಗಳ ಮೂಲಕ ಶರಣರು ಅನುಭಾವವನ್ನು ನಿಜದ ನೆಲೆಯನ್ನು ತಿಳಿಸಿದ್ದು, ನಾವು ಜಂಗಮರಾಗಿ ಬಸವತತ್ವ ಪ್ರಸಾರ ಮಾಡಬೇಕು. ಜನರಲ್ಲಿ ಆ ಮೂಲಕ ಬದಲಾವಣೆ ತರಬೇಕು. ಮಠ-ಮಾನ್ಯಗಳು ಮಾಡಬೇಕಾದ ಕೆಲಸವನ್ನು ಕಮ್ಮಟಗಳನ್ನು ಆಯೋಜಿಸುವ ಮೂಲಕ ಬಸವತತ್ವದ ಪ್ರಸಾರ ಕಾರ್ಯವನ್ನು ದಾವಣಗೆರೆಯ ಲಿಂ.ಶರಣೆ ಪುಟ್ಟಮ್ಮ ಮತ್ತು ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಇಳಕಲ್‌ನ ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ದಾವಣಗೆರೆಯ ಲಿಂ. ಶರಣೆ ಪುಟ್ಟಮ್ಮ ಮತ್ತು ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ದಾವಣಗೆರೆಯ ಬಸವಬಳಗ ಜೂ. ೬ರಿಂದ ೧೦ರವರೆಗೆ ಹಮ್ಮಿಕೊಂಡಿದ್ದ ೧೮ನೇ ಶರಣ ತತ್ವ ಕಮ್ಮಟ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಶರಣ ತತ್ವ ಕಮ್ಮಟಗಳಲ್ಲಿ ಅಷ್ಟಾವರಣ, ಪಂಚಾಚಾರ, ಲಿಂಗಪೂಜೆ, ಕಾಯಕ, ದಾಸೋಹದ ಬಗ್ಗೆ ಅನುಭಾವಿಗಳ ಮೂಲಕ ನೀಡುವ ತರಬೇತಿ, ಲಿಂಗಾಯತ ಧರ್ಮದ ವೈಜ್ಞಾನಿಕ ಆಚರಣೆಗಳನ್ನು ತಿಳಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಲಿಂಗಾಯತರು ಮುಜುಗರದಿಂದ ಹೊರ ಬರಬೇಕು, ಲಿಂಗವಂತರು ಕಡ್ಡಾಯವಾಗಿ ಲಿಂಗ ಧಾರಣೆ ಮಾಡಿಕೊಳ್ಳಬೇಕು. ಭಕ್ತರ ಮನೆಗಳು ಮಠಗಳಾಗಬೇಕು. ಶಿವಾನುಭವ ಸಂತಿ ಮಾಡಿ, ಲಿಂಗ, ವಿಭೂತಿ, ವಚನ ಪುಸ್ತಕ ಖರೀದಿಸಿ ಮನೆಯಲ್ಲಿ ಇರಿಸಿ. ಮನೆಗೆ ಯಾರೇ ಬರಲಿ ಅವರಿಗೆ ಲಿಂಗ, ವಿಭೂತಿ, ವಚನ ಪುಸ್ತಕ ಕಾಣಿಕೆ ನೀಡಿ, ಲಿಂಗ ಪೂಜೆಯ ಬಗ್ಗೆ ಜಾಗ್ರತಿ ವಹಿಸಿ ಇದರಿಂದ ಪರಿವರ್ತನೆಯಾಗುತ್ತದೆ ಎಂದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮರಿ ಕಲ್ಯಾಣ ಎನಿಸಿರುವ ಹಾವೇರಿ ನಗರದಲ್ಲಿ ಶರಣ ತತ್ವ ಕಮ್ಮಟ ಆಯೋಜನೆಯ ಮೂಲಕ ೧೨ನೇ ಶತಮಾನದಲ್ಲಿ ಶರಣರು ನಡೆಸಿದ ಚಳವಳಿಯ ಪುನರುತ್ಥಾನದ ಕಾರ್ಯವಾಗಿದ್ದು ಕಮ್ಮಟಗಳಿಂದ ಪರಿವರ್ತನೆ ಸಾಧ್ಯ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು ಮಾತನಾಡಿದರು.ಭಾರತಿ ಕೆಂಪಯ್ಯ, ರುದ್ರಪ್ಪ ಪಿ., ಅನುಭಾವದ ನುಡಿಗಳನ್ನಾಡಿದರು. ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದಯಣ್ಣವರ, ವರ್ತಕ ಪಿ.ಡಿ. ಶಿರೂರು, ಶಿವಬಸಪ್ಪ ಮುದ್ದಿ, ಶಿವಯೋಗಿ ಬೆನ್ನೂರು ಮಾತನಾಡಿದರು. ಚನ್ನಬಸಪ್ಪ ರೊಡ್ಡನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಉಳವೆಪ್ಪ ಪಂಪಣ್ಣನವರ ವಂದಿಸಿದರು.