ಸಾರಾಂಶ
ಮಾನವನ ದುರಾಸೆಯಿಂದ ಪ್ರಕೃತಿ ಮಾಲಿನ್ಯವಾಗುತ್ತಿದೆ. ಕೆರೆಕಟ್ಟೆ ನಾಶವಾಗಿ ಮಳೆ ಬಾರದೆ ಬರಗಾಲ ಸೃಷ್ಟಿಯಾಗಿದೆ. ಇದೇ ರೀತಿ ಮುಂದುವರೆದರೆ ಜಲಕ್ಷಾಮವಾಗಿ ನೀರಿಗಾಗಿ ಯುದ್ಧ ನಡೆಯಲಿದೆ. ಪ್ರಕೃತಿ ಪ್ರೀತಿಸುವ ಕಾಲ ಸೃಷ್ಟಿಯಾಗಬೇಕಿದೆ. ಪ್ರತಿವರ್ಷ ಬರಗಾಲ ಎದುರಾಗಿ ಸಕಾಲಕ್ಕೆ ಮಳೆ ಬಾರದೆ ಸಂಕಷ್ಟದ ಬದುಕು ನಿರ್ಮಾಣವಾಗುತ್ತಿದೆ. ಪರಿಸರ ಉಳಿಸಲು ಮರಗಿಡ ಸುತ್ತಮುತ್ತ ಬೆಳೆಸಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮಾಜದ ಸಮಗ್ರ ಅಭಿವೃದ್ಧಿ, ಆರ್ಥಿಕ ಸಬಲೀಕರಣಕ್ಕಾಗಿ ಸದಾ ಜೀವನ್ಮುಖಿಯಾಗಿ ಗ್ರಾಮಾಭಿವೃದ್ಧಿ ಸಂಸ್ಥೆ ಕೆಲಸ ಮಾಡಲಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.ಬೇವಿನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಕು ಜ್ಞಾನ ವಿಕಾಸ ಕೇಂದ್ರ ಹಮ್ಮಿಕೊಂಡಿದ್ದ ಮದ್ಯವರ್ಜನೆ, ನೀರು ಸದ್ಭಳಕೆ, ಸಂಸ್ಥೆ ಯೋಜನೆ ಕುರಿತು ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಮಾನವನ ದುರಾಸೆಯಿಂದ ಪ್ರಕೃತಿ ಮಾಲಿನ್ಯವಾಗುತ್ತಿದೆ. ಕೆರೆಕಟ್ಟೆ ನಾಶವಾಗಿ ಮಳೆ ಬಾರದೆ ಬರಗಾಲ ಸೃಷ್ಟಿಯಾಗಿದೆ. ಇದೇ ರೀತಿ ಮುಂದುವರೆದರೆ ಜಲಕ್ಷಾಮವಾಗಿ ನೀರಿಗಾಗಿ ಯುದ್ಧ ನಡೆಯಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.ಪ್ರಕೃತಿ ಪ್ರೀತಿಸುವ ಕಾಲ ಸೃಷ್ಟಿಯಾಗಬೇಕಿದೆ. ಪ್ರತಿವರ್ಷ ಬರಗಾಲ ಎದುರಾಗಿ ಸಕಾಲಕ್ಕೆ ಮಳೆ ಬಾರದೆ ಸಂಕಷ್ಟದ ಬದುಕು ನಿರ್ಮಾಣವಾಗುತ್ತಿದೆ. ಪರಿಸರ ಉಳಿಸಲು ಮರಗಿಡ ಸುತ್ತಮುತ್ತ ಬೆಳೆಸಬೇಕು ಎಂದು ಕರೆ ನೀಡಿದರು.
ಸಂಸ್ಥೆ ರಾಜ್ಯಾದ್ಯಂತ ಸಮಾಜದ ಸಮಗ್ರ ಪರಿವರ್ತನೆ, ಮಹಿಳಾ ಸಬಲೀಕರಣ, ಮದ್ಯವರ್ಜನೆ, ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆಗಳ ಬೀದಿ ನಾಟಕಗಳ ಮೂಲಕ ಎಲ್ಲರ ಮನ ತಲುಪಿಸಲು ಮುಂದಾಗಿದೆ ಎಂದರು.ಕೊಳವೆ ಬಾವಿಗಳ ಅವಲಂಬಿಸದೆ ಸಣ್ಣ ಹಳ್ಳ ಕಂಡರೂ ಕಟ್ಟೆ, ಒಡ್ಡು ನಿರ್ಮಿಸಬೇಕು. ಇಂಗು ಗುಂಡಿಗಳನ್ನು ಬಳಸಬೇಕು. ಕೆರೆಕಟ್ಟೆಗಳನ್ನು ಒತ್ತುವರಿಯಾಗದೆ ನೋಡಿಕೊಂಡು ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕುಡಿತ ಸಮಾಜದ ದೊಡ್ಡ ಪಿಡುಗು. ದುಡ್ಡುಕೊಟ್ಟು ಮರ್ಯಾದೆ, ಆರೋಗ್ಯ ಹಾಳು ಮಾಡಿಕೊಂಡು ಮನೆಯನ್ನು ಸರ್ವನಾಶ ಮಾಡಲಿದೆ ಎಂದು ಎಚ್ಚರಿಸಿದರು. ಸ್ನೇಹಜೀವಿ ಕಲಾತಂಡದವರು ಸಂಸ್ಥೆ ರೂಪಿಸಿರುವ ಪ್ರಗತಿನಿಧಿ ಯೋಜನೆ, ಜ್ಞಾನವಿಕಾಸ ಯೂಟ್ಯೂಬ್ ವಾಹಿನಿ, ಮದ್ಯವರ್ಜನ ಶಿಬಿರ, ನೀರಿನ ಸದ್ಭಳಕೆ, ಸಿಎಸ್‌ಸಿ ಕೇಂದ್ರಗಳಿಂದ ಸಿಗುವ ಸೌಲಭ್ಯಕುರಿತು ನಾಟಕದ ಮೂಲಕ ಪ್ರದರ್ಶನ ನೀಡಿಅರಿವು ಮೂಡಿಸಿದರು.ಈ ವೇಳೆ ತಾಲೂ ಯೋಜನಾಧಿಕಾರಿ ಎಂ.ವೀರೇಶಪ್ಪ, ಮೇಲ್ವಿಚಾರಕಿ ರೇಣುಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾದಲಾಂಬಿಕಾ, ಸೇವಾ ಪ್ರತಿನಿಧಿ ಮಂಗಳಾ, ಗ್ರಾಮ ಮುಖಂಡಕುಮಾರ್ ಮತ್ತಿತರರು ಉಪಸ್ಥಿತರಿದ್ದರು.