ಪಟ್ಟಣದ ಪಾರ್ಕುಗಳ ಅಭಿವೃದ್ಧಿಗೆ ₹35 ಲಕ್ಷ ಹಣ ಬಜೆಟ್ಟಿನಲ್ಲಿ ಮೀಸಲಿರಿಸಿದ್ದರೂ ಎರಡು ಪಾರ್ಕುಗಳು ಇದುವರೆಗೂ ಅಭಿವೃದ್ಧಿಯಾಗಿಲ್ಲ. ಪ್ರತಿ ಬಡಾವಣೆಯಲ್ಲಿ ಉದ್ಯಾನವನ ನಿರ್ಮಿಸಲು ಕ್ರಮ ವಹಿಸಬೇಕು. ಪಟ್ಟಣದ ಟಿ.ಬಿ ಸರ್ಕಲ್‌ನಲ್ಲಿ ಒಂದು ಸಾರ್ವಜನಿಕ ಶೌಚಾಲಯ, ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಬಡವರಿಗೆ ನಿವೇಶನ ನೀಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಲ್ಲಿ ನೂರಾರು ಸಮಸ್ಯೆಗಳು ಕಾಡುತ್ತಿವೆ. ಬಜೆಟ್ ನಲ್ಲಿ ಇವುಗಳ ಪರಿಹಾರಕ್ಕೆ ಮೊದಲ ಆದ್ಯತೆಯಾಗಿ ಅನುದಾನ ಮೀಸಲಿರಿಸುವಂತೆ ಪುರಸಭೆ ಮಾಜಿ ಸದಸ್ಯರು ಮತ್ತು ಪೌರ ಮುಖಂಡರು ಆಗ್ರಹಿಸಿದರು.

ಪಟ್ಟಣದ ಶಹರಿ ರೋಜ್ಗಾರ್ ಭವನದಲ್ಲಿ ನಡೆದ ಪುರಸಭೆಯ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಕೆಲವು ಮುಖಂಡರು ಮಾತನಾಡಿ, ಕುಡಿಯುವ ನೀರು, ವಿದ್ಯುತ್ ದೀಪ, ಫುಟ್ ಪಾತ್ ಒತ್ತುವರಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಸದಸ್ಯ ಎಚ್.ಆರ್.ಲೋಕೇಶ್ ಮಾತನಾಡಿ, ಹೊಸಹೊಳಲು ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಬಳಿ ಹೈಮಾಸ್ಟ್ ದೀಪ ಕೆಟ್ಟು ನಿಂತಿದೆ. ಅಲ್ಲದೆ ಬಹುತೇಕ ಬಡಾವಣೆಗಳಲ್ಲಿ ನಲ್ಲಿ ನೀರು ಲೀಕೇಜ್ ಆಗಿ ಪೋಲಾಗುತ್ತಿದೆ. ಕೆಲವು ಕಡೆ ಚರಂಡಿ ನೀರು ಸೇರಿ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದರು.

ಫುಟ್ ಪಾತ್ ಒತ್ತುವರಿಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಬಹುತೇಕ ಕಡೆ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದರೂ ನಮ್ಮ ಪಟ್ಟಣದಲ್ಲಿ ಮಾತ್ರ ಇದು ಆಗುತ್ತಿಲ್ಲ. ಫುಟ್ ಪಾತ್ ವ್ಯಾಪಾರಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ತಿಳಿಸಿದರು.

ಪುರಸಭೆ ಹಿರಿಯ ಮಾಜಿ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ, ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಒಂದು ಸಾರ್ವಜನಿಕ ಸ್ಮಶಾನವಿಲ್ಲ. ಇರುವ ಸ್ಮಶಾನ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಅದು ಉಪಯೋಗಕ್ಕೆ ಲಭ್ಯವಿಲ್ಲ ಎಂದರು.

ಪಟ್ಟಣದಲ್ಲಿ ಎರಡು ಕಡೆ ವಿದ್ಯುತ್ ಚಿತಾಗಾರ ನಿರ್ಮಿಸಬೇಕು. ತಕ್ಷಣವೇ ಪಟ್ಟಣದ ದೇವೀರಮ್ಮಣ್ಣಿ ಕೆರೆ ಕೋಡಿ ಮತ್ತು ಹೊಸ ಹೊಳಲು ಚಿಕ್ಕ ಕೆರೆ ಏರಿ ಬಳಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ಒತ್ತಾಯಿಸಿದರು.

ಪಟ್ಟಣದ ಜಯನಗರ ಬಡಾವಣೆ ನಾಗನಹಳ್ಳಿ ಎಲ್ಲೆಯ ಭಾಗ ಮುರುಕನಹಳ್ಳಿ ಗ್ರಾಪಂ, ಬಿಲ್ಲರಾಮನಹಳ್ಳಿಯ ಭಾಗ ಹರಿಹರಪುರ ಗ್ರಾಪಂ, ಸಾದುಗೋನಹಳ್ಳಿ ಎಲ್ಲೆಯ ಭಾಗ ಮಾಕವಳ್ಳಿ ಗ್ರಾಪಂ ಎಲ್ಲೆಗೆ ಸೇರಿದೆ. ಆದರೆ, ಪಟ್ಟಣದ ಹೊರವಲಯದ ಬಡಾವಣೆಗಳಿಗೆ ನಮ್ಮ ಪುರಸಭೆಯಿಂದ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಪೌರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಬಡಾವಣೆಗಳ ಅಭಿವೃದ್ಧಿ ವೆಚ್ಚ ನಮ್ಮದು. ಆದರೆ, ಕಂದಾಯ ಮತ್ತಿತರ ಆದಾಯಗಳು ನೆರೆಯ ಗ್ರಾಪಂಗಳಿಗೆ ಹೋಗುತ್ತಿದೆ. ಇದರಿಂದ ಪುರಸಭೆಗೆ ನಷ್ಠವಾಗುತ್ತಿದೆ. ತಕ್ಷಣವೇ ಜಿಲ್ಲಾಧಿಕಾರಿಗಳೊಂದಿಗೆ ಬಡಾವಣೆಗಳನ್ನು ಪುರಸಭಾ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಪಾರ್ಕುಗಳ ಅಭಿವೃದ್ಧಿಗೆ ₹35 ಲಕ್ಷ ಹಣ ಬಜೆಟ್ಟಿನಲ್ಲಿ ಮೀಸಲಿರಿಸಿದ್ದರೂ ಎರಡು ಪಾರ್ಕುಗಳು ಇದುವರೆಗೂ ಅಭಿವೃದ್ಧಿಯಾಗಿಲ್ಲ. ಪ್ರತಿ ಬಡಾವಣೆಯಲ್ಲಿ ಉದ್ಯಾನವನ ನಿರ್ಮಿಸಲು ಕ್ರಮ ವಹಿಸಬೇಕು. ಪಟ್ಟಣದ ಟಿ.ಬಿ ಸರ್ಕಲ್‌ನಲ್ಲಿ ಒಂದು ಸಾರ್ವಜನಿಕ ಶೌಚಾಲಯ, ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಬಡವರಿಗೆ ನಿವೇಶನ ನೀಡಬೇಕು ಎಂದರು.

ಸಭೆಗೆ ಪುರಸಭೆಗೆ ಆಡಳಿತಧಿಕಾರಿಗಳಾಗಿರುವ ಎಸಿ ಡಾ.ಕೆ.ಶ್ರೀನಿವಾಸ್ ಅವರು ಗೈರಾಗಿರುವುದಕ್ಕೆ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ಖಂಡಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸದಸ್ಯರಾದ ತಿಮ್ಮೇಗೌಡ, ಪ್ರಮೋದಕುಮಾರ್, ಅಸ್ಮತ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬನ್ನಾರಿ, ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಹೊಸಹೊಳಲು ಪುಟ್ಟರಾಜು ಸೇರಿ ಹಲವು ಮುಖಂಡರು ಮತ್ತು ಪುರಸಬಾ ಸಿಬ್ಬಂದಿ ಭಾಗವಹಿಸಿದ್ದರು.