ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಕ್ಕರೆ ಕಾಯಿಲೆ ಇಂದು ಅತ್ಯಂತ ಗಂಭೀರವಾದ ಕಾಯಿಲೆಯಾಗಿ ಕಾಡುತ್ತಿದ್ದು, ಈ ಬಗ್ಗೆ ವಾಸ್ತವಿಕ ಅರಿವು ಪಡೆಯುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು ಎಂದು ವಿಧಾನಪರಿಷತ್ತು ಸದಸ್ಯ ಸುಧಾಮದಾಸ್ ತಿಳಿಸಿದರು.ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಸುಯೋಗ್ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್ ಭಾನುವಾರ ಆಯೋಜಿಸಿದ್ದ ಸಕ್ಕರೆ ಕಾಯಿಲೆಯ ರಿಯಾಯತಿ ಪ್ಯಾಕೇಜ್ ಬಿಡುಗಡೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಕ್ಕರೆಕಾಯಿಲೆ ಬಗ್ಗೆ ಒಬ್ಬೊಬ್ಬರು ಒಂದೊಂದು ಬಗೆಯ ಹೇಳಿಕೆ ನೀಡುತ್ತಿದ್ದು, ಕೆಲವರು ಇದನ್ನು ಕಾಯಿಲೆಯೆಂತಲೂ, ಮತ್ತೆ ಕೆಲವರು ಜೀವನಶೈಲಿಯ ಅಸಮತೋಲನವೆಂತಲೂ, ಇದಕ್ಕೆ ಔಷಧ ಪಡೆಯದೆ ಜೀವನಶೈಲಿಯಿಂದಲೇ ಸರಿಪಡಿಸಿಕೊಳ್ಳಬಹುದೆಂದು ಮತ್ತೊಬ್ಬರು ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗೊಂದಲಮಯ ವಾತಾವರಣ ನಿರ್ಮಿಸುತ್ತಿದ್ದು, ಈ ಬಗ್ಗೆ ವಾಸ್ತವಿಕ ಅರಿವು ಅತ್ಯಗತ್ಯ ಎಂದರು.ಸಕ್ಕರೆಕಾಯಿಲೆ ರಿಯಾಯತಿ ಬೆಲೆಯ ಪ್ಯಾಕೇಜ್ ಬಿಡುಗಡೆಗೊಳಿಸಿದ ಅಮೆರಿಕಾದ ಸ್ಕಾಟ್ ಲೈನ್ ಹೆಲ್ತ್ ಕೇರ್‌ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಡಾ. ಕ್ರಿಸ್ ಮೂರ್ತಿ ಮಾತನಾಡಿ, ವರ್ಷಕ್ಕೆ 21 ಸಾವಿರ ರೂ. ಬೆಲೆಯ ಸಕ್ಕರೆಕಾಯಿಲೆಯ ತಪಾಸಣಾ ಪ್ಯಾಕೇಜನ್ನು ಕೇವಲ 3500 ರೂ. ನೀಡುತ್ತಿರುವುದು ಶ್ಲಾಘನೀಯ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ನೀಡಲು ಪ್ರಯತ್ನಿಸುವುದಾಗಿ ಹೇಳಿದರು.
ಮಹಾನ್ ಅಧ್ಯಕ್ಷ ಡಾ. ಜಾವೀದ್ ಮಾತನಾಡಿ, ಸಕ್ಕರೆಕಾಯಿಲೆಯು ಸುಶಿಕ್ಷಿತರ ಪಾಲಿಗೆ ವರಪ್ರಸಾದ. ಡಯಾಬಿಟಿಸ್ ಬಗ್ಗೆ ಶಿಕ್ಷಣ, ಅರಿವು ಇದ್ದರೆ ಅದರ ನಿರ್ವಹಣೆ ಬಹಳ ಸುಲಭ ಎಂದರು.ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಟ್ರಸ್ಟಿ ಸುಧಾ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ವೈದ್ಯಕೀಯ ನಿರ್ದೇಶಕ ಡಾ.ಆರ್. ರಾಜೇಂದ್ರಪ್ರಸಾದ್, ನಿರ್ದೇಶಕಿ ಡಾ. ಸೀಮಾ ಯೋಗಣ್ಣ, ಸುಯೋಗ್ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್ ಅಧ್ಯಕ್ಷ ನಂಜಪ್ಪ, ಕಾರ್ಯಾಧ್ಯಕ್ಷ ಎಚ್.ಎಸ್. ರಮೇಶ್ ಚಂದ್ರ, ಕಾರ್ಯದರ್ಶಿ ಕೃಷ್ಣ, ಮಧುಮೇಹ ತಜ್ಞ ಡಾ. ಅಭಿಲಾಷ್ ಮೊದಲಾದವರು ಇದ್ದರು.