ನಾಮ ನಿರ್ದೇಶನ ಸದಸ್ಯದಿಂದ ಸ್ವಾಮಿಗೌಡ ಅನೂರ್ಜಿತದ ನಿರ್ಣಯ

| Published : Oct 11 2024, 11:54 PM IST

ನಾಮ ನಿರ್ದೇಶನ ಸದಸ್ಯದಿಂದ ಸ್ವಾಮಿಗೌಡ ಅನೂರ್ಜಿತದ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ 88ನೇ ವಿಷಯವಾಗಿ ಸದಸ್ಯರಾದ ಎಚ್.ಪಿ. ಸತೀಶ್‌ ಕುಮಾರ್, ಸಿ. ದೇವರಾಜು, ಮಾಲಿಕ್ ಪಾಷ, ರಾಣಿ ಮತ್ತು ವಿವೇಕಾನಂದ ಯೋಜನಾ ಪ್ರಾಧಿಕಾರಕ್ಕೆ ಎರಡು ವರ್ಷಗಳ ಹಿಂದೆ ಸ್ವಾಮಿಗೌಡರನ್ನು ನೇಮಿಸಿದ್ದು, ಇವರ ಬದಲಿಗೆ ಹೊಸದಾಗಿ ಬೇರೊಬ್ಬ ಸದಸ್ಯರನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಿಸಲು ಕೋರಿದ್ದರು.

ಕನ್ನಡಪ್ರಭ ವಾರ್ತೆ ಹುಣಸೂರು

ಎರಡು ವರ್ಷಗಳ ಹಿಂದೆ ಹುಣಸೂರು ನಗರ ಯೋಜನಾ ಪ್ರಾಧಿಕಾರ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದ ನಗರಸಭೆ ಸದಸ್ಯ ಸ್ವಾಮಿಗೌಡ ಅವರ ನೇಮಕವನ್ನು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಹುಮತಗಳೊಂದಿಗೆ ಅನೂರ್ಜಿತಗೊಳಿಸಲಾಯಿತು.

ಪ್ರಾಧಿಕಾರ ಸಮಿತಿ ಸದಸ್ಯರಾಗಿ ನೇಮಕಗೊಂಡು ಪದಚ್ಯುತಿಗೊಂಡಿದ್ದ ಪಕ್ಷೇತರ ಸದಸ್ಯ ಎಚ್.ಪಿ. ಸತೀಶ್‌ ಕುಮಾರ್‌ ಅವರನ್ನೇ ಮತ್ತೆ ಸಮಿತಿ ಸದಸ್ಯರನ್ನಾಗಿ ನೇಮಿಸಲು ಸಭೆಯಲ್ಲಿ ತೀರ್ಮಾನಿಸಿತು.

ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ 88ನೇ ವಿಷಯವಾಗಿ ಸದಸ್ಯರಾದ ಎಚ್.ಪಿ. ಸತೀಶ್‌ ಕುಮಾರ್, ಸಿ. ದೇವರಾಜು, ಮಾಲಿಕ್ ಪಾಷ, ರಾಣಿ ಮತ್ತು ವಿವೇಕಾನಂದ ಯೋಜನಾ ಪ್ರಾಧಿಕಾರಕ್ಕೆ ಎರಡು ವರ್ಷಗಳ ಹಿಂದೆ ಸ್ವಾಮಿಗೌಡರನ್ನು ನೇಮಿಸಿದ್ದು, ಇವರ ಬದಲಿಗೆ ಹೊಸದಾಗಿ ಬೇರೊಬ್ಬ ಸದಸ್ಯರನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಿಸಲು ಕೋರಿದ್ದರು. ಇದೇ ವೇಳೆ ಸದಸ್ಯ ಭವ್ಯ 90ನೇ ವಿಷಯವಾಗಿ ಯೋಜನಾ ಪ್ರಾಧಿಕಾರಕ್ಕೆ ಸ್ವಾಮಿಗೌಡರನ್ನು ಮುಂದುವರಿಸದಿರಲು ಕೋರಿರುವ ವಿಷಯಕ್ಕೆ ತಕರಾರು ಅರ್ಜಿ ಸಲ್ಲಿಸಿ ಮಾತನಾಡಿ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1968ರಡಿ ಯೋಜನಾ ಪ್ರಾಧಿಕಾರಕ್ಕೆ ನಾಮ ನಿರ್ದೇಶಿತ ಸದಸ್ಯನಾಗಿ ನೇಮಕಗೊಳ್ಳುವ ಸದಸ್ಯ ತನ್ನ ನಗರಸಭಾ (ಸ್ಥಳೀಯ ಸಂಸ್ಥೆಯ) ಸದಸ್ಯತ್ವ ಅಂತಿಮವಾಗುವವರೆಗೂ ಪ್ರಾಧಿಕಾರದ ಸದಸ್ಯನಾಗಿ ಮುಂದುವರಿಯುತ್ತಾನೆ ಮತ್ತು ಅವರ ಪ್ರಾಧಿಕಾರದ ಸದಸ್ಯತ್ವನ್ನು ತೆಗೆದು ಹಾಕಲು ಅವಕಾಶವಿರುವುದಿಲ್ಲ, ನಗರಸಭೆಯ ಕೌನ್ಸಿಲ್ ಬಾಡಿ ಕೂಡ ಸದಸ್ಯತ್ವ ತೆಗೆದು ಹಾಕಲು ಅವಕಾಶವಿಲ್ಲವೆಂದು ತಿಳಿಸಿದೆ. ಹಾಗಾಗಿ ಸ್ವಾಮಿಗೌಡರನ್ನು ಪದಚ್ಯುತಿಗೊಳಿಸಲು ಸಾಧ್ಯವಿಲ್ಲವೆಂದು ವಾದಿಸಿದರು.

ಸದಸ್ಯೆ ಭವ್ಯಾ ಅವರು ಮಂಡಿಸಿದ ವಾದದ ಪ್ರತಿಯನ್ನು ಪಡೆದು ಓದಿದ ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ಸದಸ್ಯ ಭವ್ಯಾ ಮಂಡಿಸಿದ ವಾದದನ್ವಯ 2021ರಲ್ಲಿ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿದ್ದ ಸತೀಶ್‌ ಕುಮಾರ್‌ ಅವರನ್ನು 2022ರಲ್ಲಿ ಪದಚ್ಯುತಿಗೊಳಿಸಲಾಗಿದೆ. ಅಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸತೀಶ್‌ ಕುಮಾರ್‌ ಅವರ ಪದಚ್ಯುತಿ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ. ಭವ್ಯಾ ಅವರು ತಿಳಿಸಿದಂತೆ ಕೌನ್ಸಿಲ್ ಬಾಡಿಗೂ ಪದಚ್ಯುತಿಗೊಳಿಸಲು ಅವಕಾಶವಿಲ್ಲವೆಂದ ಮೇಲೆ ಎರಡು ವರ್ಷಗಳ ಹಿಂದೆ ನಗರಸಭೆ ಕೌನ್ಸಿಲ್ ಬಾಡಿ ಹೇಗೆ ಸ್ವಾಮಿಗೌಡ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿತು. ಇದು ಕಾಯ್ದೆಯ ಉಲ್ಲಂಘನೆ ಕ್ರಮವಾಗಿದೆ. ಹಾಗಾಗಿ ತಪ್ಪಾಗಿರುವುದನ್ನು ಸರಿಪಡಿಸಿಕೊಳ್ಳಬೇಕಿದ್ದು, ಈ ಕುರಿತು ಸದಸ್ಯರು ನಿರ್ಣಯದ ಕುರಿತು ಕೈಎತ್ತುವ ಮೂಲಕ ಅಭಿಪ್ರಾಯ ನಿರ್ಣಯಿಸಲು ಸೂಚಿಸಿದರು.

ಪ್ರಾಧಿಕಾರಕ್ಕೆ ಹೊಸ ಸದಸ್ಯರನ್ನು ನೇಮಿಸುವ ಕುರಿತು ತಕಾರಾರು ಮಂಡಿಸಿದ್ದ ಭವ್ಯರ ನಿರ್ಣಯಕ್ಕೆ 13 ಮಂದಿ ಕೈಎತ್ತಿ ಬೆಂಬಲ ವ್ಯಕ್ತಪಡಿಸಿದರೆ. ಶಾಸಕರು ಒಳಗೊಂಡು ಒಟ್ಟು 18 ಮಂದಿ ಹೊಸದಾಗಿ ಸದಸ್ಯರ ನಾಮನಿರ್ದೇಶನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆ ಮೂಲಕ ಸ್ವಾಮಿಗೌಡರನ್ನು ಪದಚ್ಯುತಗೊಳಿಸಿ ಈ ಹಿಂದೆ ಸದಸ್ಯರಾಗಿದ್ದ ಎಚ್.ಪಿ. ಸತೀಶ್‌ ಕುಮಾರ್‌ ಅವರನ್ನೇ ಸದಸ್ಯರನ್ನಾಗಿ ಮುಂದುವರಿಸಲು ಸಭೆ ನಿರ್ಣಯಿಸಿತು.

ಫುಡ್‌ ಕೋರ್ಟ್ ಜಾಗ:

ಪಟ್ಟಣದಲ್ಲಿ ಫುಟ್‌ ಪಾತ್ ಅಂಗಡಿಯವರು ವಹಿವಾಟು ನಡಸಲು ಸೇತುವೆ ಬಳಿಯ ಟ್ರ್ಯಾಕ್ಟರ್ ಶೋರೂಂ ಮುಂಭಾಗದ ನಗರಸಭೆ ಜಾಗವನ್ನು ಗುರುತಿಸಲಾಗಿದ್ದು, ಜಾಗದ ಸುತ್ತ ತಂತಿಬೇಲಿ ಅಳವಡಿಸಲು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲವೆಂದು ಸದಸ್ಯರಾದ ದೊಡ್ಡಹೆಜ್ಜೂರು ರಮೇಶ್, ಹರೀಶ್, ಗಣೇಶ್‌ ಕುಮಾರಸ್ವಾಮಿ, ಸ್ವಾಮಿಗೌಡ ಮುಂತಾದವರು ದೂರಿದಾಗ ಸಂಜೆಯೊಳಗೆ ತಂತಿ ಬೇಲಿ ಅಳವಡಿಸಿ ಕ್ರಮವಹಿಸುವಂತೆ ಶಾಸಕ ಸೂಚಿಸಿದರು.

ಸಭೆಯಲ್ಲಿ ಅಧ್ಯಕ್ಷ ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಪೌರಾಯುಕ್ತೆ ಕೆ. ಮಾನಸ, ಪರಿಸರ ಎಂಜಿನಿಯರ್ ಎಲ್. ರೂಪ, ಕಂದಾಯ ನಿರೀಕ್ಷಕ ಮಧುಸೂಧನ್ ಸದಸ್ಯರು ಇದ್ದರು.

ಅಕ್ರಮ ನೀರು ಸಂಪರ್ಕ ಸಕ್ರಮಕ್ಕೆ ದಾರಿ:

ಪಟ್ಟಣದಲ್ಲಿ 10 ಸಾವಿರಕ್ಕೂ ಹೆಚ್ಚು ಅಕ್ರಮ ಕುಡಿಯುವ ನೀರಿನ ನಲ್ಲಿ ಸಂಪರ್ಕವಿದ್ದು, ನೀರಿನ ಕರ ಸಮರ್ಪಕವಾಗಿ ವಸೂಲಾಗದೇ ನಗರಸಭೆಯ ಆದಾಯ ಖೋತಾ ಆಗುತ್ತಿದೆ ಎಂದು ಸದಸ್ಯರು ದೂರಿದಾಗ, ನೀರು ನಿರ್ವಹಣೆ ಸಂಬಂಧ ಅಧಿಕಾರಿ ಶಶಿ ಮಾತನಾಡಿ, ನಗರದಲ್ಲಿ ಒಟ್ಟು 4500 ಸಂಪರ್ಕಗಳಿದ್ದು, ಅನಧಿಕೃತ ಬಳಕೆದಾರರಿಗೆ ದಂಡಸಹಿತ ಶುಲ್ಕ ಪಾವತಿಸಲು ಕೋರಲಾಗುತ್ತಿದೆ ಎಂದು ತಿಳಿಸಿದಾಗ, ಶಾಸಕ ಹರೀಶ್‌ ಗೌಡ ಮಧ್ಯೆ ಪ್ರವೇಶಿಸಿ ಮುಂಬರುವ ಮಾರ್ಚ್‌ರೊಳಗೆ ಅನಧಿಕೃತದಾರರು ಒಟ್ಟು 3600 ರು. ಗಳನ್ನು ಪಾವತಿಸಿ ನೀರು ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬೇಕು. ಈ ಕುರಿತು ವ್ಯಾಪಕ ಪ್ರಚಾರ ನಡಸಿ ಮನೆಮೆನಗೆ ತೆರಳಿ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿರೆಂದು ಸೂಚಿಸಿದರು.