ಸಾರಾಂಶ
ಡೀಸಿ ಶಿಲ್ಪಾನಾಗ್‌ಗೆ ಮನವಿ । ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ಪಿ.ಸಿ.ವರ್ಗೀಸ್ ಕಾಲೋನಿಯ ಬೋವಿ ಜನಾಂಗಕ್ಕೆ ಮಂಜೂರಾಗಿದ್ದ ಜಮೀನನ್ನು ಅಕ್ರಮವಾಗಿ ಕ್ರಯ, ಖಾತೆ ಮಾಡಿಕೊಂಡಿರುವ ತಮಿಳುನಾಡು ಮೂಲದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಆಶ್ರಯದಲ್ಲಿ ಸಮಿತಿ ಪಿ.ಸಿ.ವರ್ಗೀಸ್ ಕಾಲೋನಿಯ ಗ್ರಾಮಸ್ಥರು ಡೀಸಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಿದರು.ಪರಿಶಿಷ್ಟ ಜಾತಿಯ ಬೋವಿ ಜನಾಂಗಕ್ಕೆ ಸೇರಿದ 60ಕ್ಕೂ ಹೆಚ್ಚು ಕುಟುಂಬಗಳು ಯಡವನಹಳ್ಳಿ ಗ್ರಾಮದ ಸರ್ವೇ ನಂ.457, 448, 449 ರ ಸರ್ಕಾರಿ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡಿಕೊಂಡು ಬರುತ್ತಿದ್ದರಿಂದ ಸದರಿ ಸಂಬಂಧಪಟ್ಟ ಅಕ್ರಮ ಸಕ್ರಮ ಕಮಿಟಿಗೆ ಅರ್ಜಿ ಸಲ್ಲಿಸಿದ್ದಾರೆ. ಬೋವಿ ಜನಾಂಗದವರಿಗೆ ಸರ್ಕಾರದಿಂದ ದರಖಾಸ್ತು ಮೂಲಕವಾಗಿ 60ಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 4 ಎಕರೆಯಂತೆ 1970-71 ರಿಂದ 1984-85ನೇ ಸಾಲಿನವರೆಗೆ ಸಾಗುವಳಿ ಪತ್ರ ನೀಡಿದ್ದು, ಈ ಭೂಮಿಯಲ್ಲಿ ನಾವು ವ್ಯವಸಾಯ ಮಾಡುತ್ತಿದ್ದೇವೆ.2006-07 ರಿಂದ ಈಚೆಗೆ ತಮಿಳುನಾಡು ಮೂಲದ ಕಣ್ಣನ್, ವಾಸುದೇವನ್, ಸುಕುಮಾರನ್ ಎನ್ನುವ ವ್ಯಕ್ತಿಗಳು ನೀವು ಬೋವಿ ಜನಾಂಗಕ್ಕೆ ಸೇರಿದವರು ನಿಮಗೆ ಸರ್ಕಾರದಿಂದ ಕೊಳವೆ ಬಾವಿ, ಬ್ಯಾಂಕ್ ಸಾಲ ಕೊಡಿಸುತ್ತೇವೆ ಎಂದು ಬಡ ಕೂಲಿ ಕಾರ್ಮಿಕರನ್ನು ವಂಚಿಸಿ ಕೆಲವೊಂದು ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಸದರಿ ಜಮೀನನ್ನು ಒಂದು ವರ್ಷ ಗುತ್ತಿಗೆ ಕೊಡಿ ಎಂದು ಕೇಳಿಕೊಂಡಿದ್ದರ ಒಂದು ವರ್ಷ ಗುತ್ತಿಗೆ ಮಾಡಿರುತ್ತೇವೆ.
ನಮ್ಮ ಜಮೀನನ್ನು ಇಲ್ಲಿಯವರೆಗೆ ನಾವೇ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚಿಗಷ್ಟೇ ನಾವು ನಮ್ಮ ಜಮೀನಿನ ಆರ್.ಟಿ.ಸಿಯನ್ನು ತೆಗೆಸಿ ನೋಡಿದಾಗ ಪೇಟಿಯಮ್ಮ, ಅಂಗಯ್ಯ, ಸುಕುಮಾರನ್, ವಾಸುದೇವನ್ ಅವರ ಹೆಸರಿನಲ್ಲಿ ಬರುತ್ತಿದೆ. ನಮಗೆ ನಮ್ಮ ಜಮೀನಿನ ಆರ್‌ಟಿಸಿಯು ಬೇರೆಯವರ ಹೆಸರಿನಲ್ಲಿ ಬರುತ್ತಿದೆಯಲ್ಲ ಎಂದು ಗಾಬರಿಗೊಂಡು ಕಂದಾಯ ಇಲಾಖೆ ಹಾಗೂ ಉಪನೋಂದಾಣಾಧಿಕಾರಿ ಕಚೇರಿ ದಾಖಲಾತಿ ಪರಿಶೀಲಿಸಿದಾಗ ಮೇಲ್ಕಂಡವರು ಅಕ್ರಮ ಜಿಪಿಎ ಪತ್ರ ಮಾಡಿಸಿಕೊಂಡು ನಂತರ ಸದರಿ ಜಿಪಿಎದಾರರು ಮೇಲ್ಕಂಡವರಿಗೆ ಅಕ್ರಮ ಕ್ರಯಪತ್ರ ಮಾಡಿಕೊಂಡಿರುವ ವಿಷಯ ಇತ್ತಿಚೀಗೆ ಬೆಳಕಿಗೆ ಬಂದಿದೆ.ನಾವು ಬೋವಿ ಜನಾಂಗಕ್ಕೆ ಸಂಬಂದಪಟ್ಟಿದ್ದರಿಂದ ಉಪವಿಭಾಗಾಧಿಕಾರಿ ನ್ಯಾಯಾಲಯ ಕೊಳ್ಳೇಗಾಲದಲ್ಲಿ ಪಿಟಿಸಿಎಲ್ ಕಾಯ್ದೆಯಡಿ ದಾವೆ ದಾಖಲಿಸಿದ್ದು. ಕೆಲವು ಪ್ರಕರಣಗಳು ಇತ್ಯರ್ಥವಾಗಿದ್ದು ಇನ್ನು ಕೆಲವು ಪ್ರಕರಣಗಳು ಚಾಲ್ತಿಯಲ್ಲಿವೆ. ಇತ್ತಿಚೀಗೆ ನಮ್ಮ ಸ್ವಾಧೀನಾನುಭವದ ಜಮೀನಿನ ಬಳಿ ತಮಿಳುನಾಡಿನ ಪೇಚಿಯಮ್ಮರ ಕಡೆಯವರಾದ ಸುಂದರ ಹಾಗೂ ಹಳ್ಳದಮಾದಹಳ್ಳಿ ಗ್ರಾಮದ ಕೃಷ್ಣ, ಬೆಳ್ಳಯ್ಯ ಅವರು ನಮ್ಮನ್ನು ಬೆದರಿಸಿ ಕೆಲಸದ ಆಳುಗಳ ಮೂಲಕ ನಮ್ಮನ್ನು ಜಮೀನಿಂದ ಬಲವಂತವಾಗಿ ಹೊರ ಹಾಕಿ ಕಬ್ಬಿಣದ ಕಂಬಗಳ ಮೂಲಕ ತಂತಿ ಬೇಲಿಯನ್ನು ಹಾಕಲು ಪ್ರಯತ್ನಿಸಿದರು.
ನಾವು ಭಯ ಭೀತರಾಗಿ ಬೇಗೂರು ಪೋಲೀಸ್ ಠಾಣೆ, ಗುಂಡ್ಲುಪೇಟೆ ತಹಸೀಲ್ದಾರ್‌ಗೆ ತಂತಿ ಬೇಲಿಯನ್ನು ಹಾಕುವುದನ್ನು ತಡೆಯುವಂತೆ ಹಾಗೂ ನಮ್ಮ ಸ್ವಾಧೀನಾನುಭವದಿಂದ ಒಕ್ಕಲೆಬ್ಬಿಸದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್ ಪ್ರಕರಣವು ದಾಖಲಾಗಿರುವ ಬಗ್ಗೆ ತಿಳಿಸಿದ್ದೇವೆ.ಅಧಿಕಾರಿಗಳು ದೂರು ನೀಡಿದರೂ ಯಾವುದೇ ಕ್ರಮ ವಹಿಸದೆ ಭೂಗಳ್ಳರಿಗೆ ರಕ್ಷಣೆಯನ್ನು ನೀಡಿದ್ದಾರೆ. ನೀವು ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಒದ್ದು ಹೊರಗೆ ಹಾಕಿ ಕೇಸ್ ದಾಖಲಿಸಿ ಜೈಲಿಗೆ ಹಾಕುತ್ತೇವೆ ಎಂದು ಬೇಗೂರು ಪೋಲಿಸ್ ಠಾಣೆಯವರು ಬೆದರಿಸಿದ್ದಾರೆ ಎಂದು ಆರೋಪಿಸಿದರು.ಪೋಲಿಸ್, ಕಂದಾಯ ಇಲಾಖೆಯ ಸರ್ವೇಯವರು ಯಾವುದೇ ದುರಸ್ತಿ ಆಗದೇ ಇರುವ ಮೇಲ್ಕಂಡ ಜಮೀನುಗಳನ್ನು ಅಕ್ರಮವಾಗಿ ಅಳತೆ ಮಾಡಿಸಿ ಸರ್ಕಾರಿ ಜಮೀನು ಒತ್ತುವರಿ ಮಾಡಿಸಿ ತಂತಿಬೇಲಿ ನಿರ್ಮಿಸಿದ್ದಾರೆ. ನಮಗೆ ಸರ್ಕಾರದವರು ಪಿ.ಸಿ ವರ್ಗಿಸ್ ಕಾಲೋನಿ ಎಂಬ ಒಂದು ಕಾಲೋನಿಯನ್ನು ನಿರ್ಮಿಸಿಕೊಟ್ಟಿದ್ದು, ನಮ್ಮ ಮನೆಗಳು ನಶಿಸಿ ಹೋಗುತ್ತಿವೆ.ಅಲ್ಲಿ ನಮಗೆ ಚಿರತೆ, ಕಾಡು ಹಂದಿ, ಹಾವು, ಚೇಳು, ಗೋಸುಂಬೆ ನಡುವೆ ವಾಸ ಮಾಡಲು ತೊಂದರೆಯಾಗುತ್ತಿದೆ. ನಮ್ಮ ಕಾಲೋನಿಗೆ ಸರಿಯಾಗಿ ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಸೌಲಭ್ಯ ಇಲ್ಲ. ಜೀವನೋಪಾಯಕ್ಕಾಗಿ ಬೇರೆ ಬೇರೆ ಗ್ರಾಮಗಳಿಗೆ ವಲಸ ಹೋಗುವ ಸ್ಥಿತಿ ಉಂಟಾಗಿದೆ ಎಂದರು.
ಮೆಲ್ಕಂಡ ಸರ್ವೆ ನಂಬರ್‌ಗಳ ಜಮೀನನ್ನು ಅಕ್ರಮವಾಗಿ ಕ್ರಯ ಖಾತೆ ಜಿ.ಪಿ.ಎ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕಾಲೋನಿಗೆ ಅಗತ್ಯ ಮೂಲಭೂತ ಸೌಲಭ್ಯ ನೀಡಬೇಕು. ಜಮೀನಿಗೆ ಅಳವಡಿಸಿರುವ ತಂತಿ ಬೇಲಿ ತೆರವುಗೊಳಿಸಿ, ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್, ಎಂ.ಶಿವಮೂರ್ತಿ, ಸಿದ್ದರಾಜು ಹಂಗಳ, ಡ್ಯಾನ್ಸ್ ಬಸವರಾಜು, ಜಿ.ಎಂ.ಶಂಕರ್, ಸೋಮು, ಮನು, ರಾಚಪ್ಪ, ಕುಮಾರ್, ಸೋಮೇಶ್, ರಂಗನಾಯಕ, ಮಹೇಶ್ವರಿ, ರತ್ನಮ್ಮ, ಚಿನ್ನಮ್ಮ, ಸಿ.ಎಂ.ಶಂಕರ್, ಸುಂದರ್, ಸಿ.ಎಚ್.ರಂಗಸ್ವಾಮಿ, ಕೋಡಹಳ್ಳಿ ರಾಜು, ಕುಮಾರ್ ಪುಟ್ಟಬುದ್ದಿ ಇದ್ದರು.