ಸಾರಾಂಶ
ಈ ನಾಡಿನ ಪವಿತ್ರ ಸ್ಥಳ ಶ್ರೀ ಮಂಜುನಾಥನ ಸನ್ನಿಧಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.
ಮುಂಡರಗಿ: ಈ ನಾಡಿನ ಪವಿತ್ರ ಸ್ಥಳ ಶ್ರೀ ಮಂಜುನಾಥನ ಸನ್ನಿಧಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.
ಅವರು ಶನಿವಾರ ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದು ತಿಳಿಸಿದ್ದಾರೆ. ಧಾರ್ಮಿಕ ಕ್ಷೇತ್ರದ ಮೇಲೆ ಇಲ್ಲ-ಸಲ್ಲದ ಮಾತುಗಳನ್ನಾಡಿ ಅಪಪ್ರಚಾರ ಮಾಡುವುದು ಭೂಷಣವಲ್ಲ. ಇದೆಲ್ಲ ಧರ್ಮಕ್ಕೆ ಅಪಚಾರ ಮಾಡಿದಂತೆ. ಧರ್ಮದ ಸ್ವಾಸ್ಥ್ಯ ಕೆಡಿಸಿ, ಧಾರ್ಮಿಕ ಭಾವನೆಗೆ ಕಳಂಕ ತರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಬಿಟ್ಟರೆ ಶರಣರ ನಾಡಾದ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತದೆ.ಧರ್ಮಸ್ಥಳವು ಧಾರ್ಮಿಕ ಕೇಂದ್ರವಾಗಿದ್ದು, ಅನಾಮಿಕ ವ್ಯಕ್ತಿಯ ದೂರಿನಿಂದ ಅಪಚಾರವೆಸಗುತ್ತಿರುವುದು ಸೂಕ್ತವಲ್ಲ. ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಅಪಾರ ಸೇವೆ ಗೈಯುತ್ತಿರುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ಸಾಧನೆಯನ್ನಾದರೂ ಗಮನಿಸಿ ನಿಜಾಂಶವನ್ನು ಬಯಲಿಗೆಳೆಯಬೇಕು. ಈಗಾಗಲೇ ತಿಳಿದಿರುವ ಹಾಗೆ ಆ ಅನಾಮಿಕ ವ್ಯಕ್ತಿಯನ್ನು ಬಂಧಿಸಿದ್ದು ಸಂತಸ ತಂದಿದೆ.
ಆ ಅನಾಮಿಕ ವ್ಯಕ್ತಿಯ ಹಿಂದೆ ಇರುವ ಕೈಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಮಾಡಬೇಕು. ಅಂದಾಗ ಇಂತಹ ಕುತಂತ್ರಗಳು ಇನ್ನೊಮ್ಮೆ ರಾಜ್ಯದಲ್ಲಿ ಎಲ್ಲಿಯೂ ನಡೆಯುವುದಿಲ್ಲ. ಇಂತಹ ಷಡ್ಯಂತ್ರಗಳಿಂದ ಧರ್ಮಧಿಕಾರಿಗಳ ಮನಸ್ಸಿಗೆ ನೋವಾಗುತ್ತದೆ. ಧರ್ಮಾಧಿಕಾರಿಗಳ ಮನಸ್ಸು ನೋಯಿಸುವುದು ಸಾದುವಲ್ಲ. ಈ ಷಡ್ಯಂತರವನ್ನು ಮೊದಲೇ ಚೂಟಿ ಹಾಕಿದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು ಎಂದು ಶ್ರೀಗಳು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.