ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಕೊಳೆರೋಗ ಹಾಗೂ ಎಲೆಚುಕ್ಕೆ ರೋಗಗಳಿಂದ ಅಡಕೆ ಬೆಳೆಗಾರರು ತತ್ತರಿಸಿ ಹೋಗಿದ್ದು, ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ಹಿತಕಾಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಕೊಳೆರೋಗ ಹಾಗೂ ಎಲೆಚುಕ್ಕೆ ರೋಗಗಳಿಂದ ಅಡಕೆ ಬೆಳೆಗಾರರು ತತ್ತರಿಸಿ ಹೋಗಿದ್ದು, ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ಹಿತಕಾಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಲೆ ಏರಿಕೆ ಬೆಳೆಗಾರರು ಅಡಕೆಯತ್ತ ಆಕರ್ಷಿಸಲು ಕಾರಣವಾಗಿದೆ. ಆದರೆ, ಅಡಕೆ ಬೆಳೆಗೆ ಬಾಧಿಸುತ್ತಿರುವ ರೋಗಗಳಿಂದ ಹಿಡುವಳಿ ಕಡಿಮೆಯಾಗಿ ಏರಿದ ದರಗಳು ಬೆಳೆಗಾರರ ಕೈಗೆ ಸಿಗುತ್ತಿಲ್ಲ. ವಿದೇಶಿ ಕಳಪೆ ಅಡಕೆಗಳ ಆಮದು ಕೂಡ ಬೆಳೆಗಾರರಿಗೆ ಸಂಕಷ್ಟ ನೀಡುತ್ತಿದೆ. ಆಹಾರ ಭದ್ರತಾ ಆಯೋಗವು ಅಡಕೆ ತೇವಾಂಶದ ಬಗ್ಗೆ ಶೇ.7 ರಷ್ಟು ತೇವಾಂಶ ಇರಬೇಕು ಎಂದು ತಪ್ಪು ಮಾಹಿತಿ ನೀಡಿದೆ. ಆದರೆ ಈ ಪ್ರಮಾಣವನ್ನು ಶೇ.11.25ಕ್ಕೆ ಏರಿಸಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದರು.ಈ ಹಿಂದಿನ ಯುಪಿಎ ಸರ್ಕಾರ ಅಡಕೆ ಕ್ಯಾನ್ಸರ್‌ಕಾರಕವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿತ್ತು. ಈಗ ಅಡಿಕೆ ಮನುಷ್ಯನಿಗೆ ಹಾನಿಕಾರಕವಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿದೆ. ಅಡಿಕೆ ಹಾನಿಕಾರಕವಲ್ಲ ಎಂದು ರುಜುವಾತು ಮಾಡಲು ಅಡಿಕೆ ಸಂಶೋಧನಾ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಈಗಾಗಲೇ ಅಡಿಕೆ ಸಂಶೋಧನಾ ಕೇಂದ್ರಕ್ಕೆ 15 ಲಕ್ಷ ರು. ಅನುದಾನ ನೀಡಿದೆ. ಅಡಿಕೆಯನ್ನು ಅರಣ್ಯ ಉತ್ಪನ್ನಗಳ ಪಟ್ಟಿಗೆ ಸೇರಿಸಿದ್ದು, ಅದನ್ನು ಆ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವರನ್ನು ಕೋರಲಾಗಿದೆ.
ಕೇಂದ್ರದ ಮಹತ್ವಾಕಾಂಕ್ಷಿ ಬೆಳೆವಿಮೆ ಯೋಜನೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಮಳೆಮಾಪನ ಯಂತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಮನಸ್ಸಿಗೆ ಬಂದಂತೆ ಮಳೆಯ ವರದಿಯನ್ನು ಕೊಡುತ್ತಿರುವುದೂ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಎಲೆಚುಕ್ಕೆ ರೋಗದ ಸಂಶೋಧನೆಗೆ ಕೇಂದ್ರ ಸರ್ಕಾರ ತಾಂತ್ರಿಕ ಸಮಿತಿ ರಚಿಸಿದೆ. ರಾಜ್ಯದ ಅಡಕೆ ಬೆಳೆಯುವ ಪ್ರದೇಶದ ಸದಸ್ಯರು ಲೋಕಸಭೆಯಲ್ಲಿ ಈ ಕುರಿತು ಈ ಬಾರಿಯ ಅಧಿವೇಶನದಲ್ಲಿ ಹೆಚ್ಚಿನ ರೀತಿಯಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಲ್ಲದೆ ಕೇಂದ್ರ ಸರ್ಕಾರ ಅಡಿಕೆ ಸಂಶೋಧನೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ಮೂಲಕ ಸಂಶೋಧನೆಗೆ ಒತ್ತು ನೀಡಿರುವುದು ರೈತರಲ್ಲಿ ಆಶಾಭಾವನೆ ಉಂಟುಮಾಡಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಶೃಂಗೇರಿಗಳಲ್ಲಿ ಅಡಕೆ ಸಂಶೋಧನಾ ಕೇಂದ್ರಗಳು ರಾಜ್ಯ ಸರ್ಕಾರದ ಅನುದಾನವಿಲ್ಲದೆ ಕೆಲಸ ಸ್ಥಗಿತಗೊಳಿಸಿದ್ದು ವಿಷಾಧನೀಯ. ತೀರ್ಥಹಳ್ಳಿ, ಹೊಸನಗರ, ಸಾಗರದ ಕೆಲವು ಭಾಗಗಳು, ಉತ್ತರ ಕನ್ನಡದ ಸಿದ್ಧಾಪುರ ತಾಲ್ಲೂಕುಗಳಲ್ಲಿ ಅಡಿಕೆಗೆ ಎಲೆಚುಕ್ಕೆ ರೋಗಗಳಿಂದ ರೈತರು ತತ್ತರಿಸಿ ಹೋಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅಡಕೆ ಬೆಳೆಗಾರರಿಗೆ ಪರಿಹಾರಕ್ಕಾಗಿ ಬಜೆಟ್‌ನಲ್ಲಿ 62 ಕೋಟಿ ರು. ಪ್ರಕಟಿಸಿದ್ದರೂ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.ನಿರ್ದೇಶಕರಾದ ಕೆ.ಎಂ.ಸೂರ್ಯನಾರಾಯಣ, ಛದ್ಮಹಾಲಪ್ಪ, ಬಿ.ಕೆ.ಶಿವಕುಮಾರ್, ಸುಬ್ರಹ್ಮಣ್ಯ ಯಡಗೆರೆ, ಗೋಪಾಲಕೃಷ್ಣ ವೈದ್ಯ, ಎಚ್.ಎಲ್.ಮಹೇಶ್, ಶಂಭುಲಿಂಗ ಹೆಗಡೆ, ಎಚ್.ಎಸ್.ಶಿವಶಂಕರ್, ಷಡಾಕ್ಷರಿ, ಗುರಪ್ಪ ಮತ್ತಿತರರು ಇದ್ದರು.