ಕಳೆದ ಏಳು ತಿಂಗಳಲ್ಲಿ ಕಾರ್ಮಿಕ ಇಲಾಖೆಯಿಂದ ಮಂಡ್ಯ ಜಿಲ್ಲೆಯ ೫೦೨ ಕಡೆ ತಪಾಸಣೆ ನಡೆಸಿ ೩೨ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ೧೧ ಪ್ರಕರಣ ದಾಖಲುಪಡಿಸಿ, ೬ ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಏಳು ತಿಂಗಳಲ್ಲಿ ಕಾರ್ಮಿಕ ಇಲಾಖೆಯಿಂದ ಜಿಲ್ಲೆಯ ೫೦೨ ಕಡೆ ತಪಾಸಣೆ ನಡೆಸಿ ೩೨ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ೧೧ ಪ್ರಕರಣ ದಾಖಲುಪಡಿಸಿ, ೬ ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿದ್ದಾರೆ.ಜಿಲ್ಲೆಯ ಗ್ಯಾರೇಜ್‌ಗಳು, ಬೇಕರಿಗಳು, ಬೈಕ್ ಪಾಯಿಂಟ್‌ಗಳು, ಆಲೆಮನೆ, ಎಲೆಕ್ಟ್ರಿಕ್ ಅಂಗಡಿಗಳು ಸೇರಿದಂತೆ ವಿವಿಧೆಡೆ ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಎಂ.ಸವಿತಾ ನೇತೃತ್ವದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಕಿಶೋರ ಕಾರ್ಮಿಕರು ಪತ್ತೆಯಾಗಿದ್ದಾರೆ. ಪತ್ತೆಯಾದ ಬಾಲಕರೆಲ್ಲರೂ ಜಿಲ್ಲೆಯವರೇ ಆಗಿದ್ದಾರೆ. ಇದರಲ್ಲಿ ೧೫ ಮಕ್ಕಳನ್ನು ಬಾಲ ಮಂದಿರಕ್ಕೆ, ೧೦ ಮಕ್ಕಳನ್ನು ಶಾಲೆಗೆ ಹಾಗೂ ೫ ಮಕ್ಕಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.
ಮಂಡ್ಯ ಒಂದನೇ ವೃತ್ತದಲ್ಲಿ ೬೯ ಕಡೆ ತಪಾಸಣೆ ನಡೆಸಿ ೭ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿ ಎರಡು ಪ್ರಕರಣ ದಾಖಲಿಸುವುದರೊಂದಿಗೆ ಇಬ್ಬರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಮಂಡ್ಯ ಎರಡನೇ ವೃತ್ತದ ೬೧ಕಡೆ ತಪಾಸಣೆ ನಡೆಸಿ ೮ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಸಂಬಂಧ ೩ ಎಫ್‌ಐಆರ್ ದಾಖಲಿಸಲಾಗಿದೆ.ಮದ್ದೂರು ತಾಲೂಕಿನ ೧೨೨ ಕಡೆ ತಪಾಸಣೆ ನಡೆಸಿ ೫ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಒಂದು ಪ್ರಕರಣ ದಾಖಲಿಸಿ ಇಬ್ಬರಿಗೆ ಪುನರ್ವಸತಿ ಕಲ್ಪಿಸಿದೆ. ಕೆ.ಆರ್.ಪೇಟೆ ತಾಲೂಕಿನ ೪೬ ಕಡೆ ತಪಾಸಣೆ ನಡೆಸಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಇಬ್ಬರು ಬಾಲಕರನ್ನು ರಕ್ಷಣೆ ಮಾಡಿ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಿಸಿದೆ. ಒಬ್ಬ ಬಾಲಕನಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಮಳವಳ್ಳಿ ತಾಲೂಕಿನ ೬೪ ಕಡೆ ತಪಾಸಣೆ ನಡೆಸಿದ್ದು ಅಲ್ಲಿ ಬಾಲಕಾರ್ಮಿಕರು-ಕಿಶೋರ ಕಾರ್ಮಿಕರು ಪತ್ತೆಯಾಗಿಲ್ಲ.
ಪಾಂಡವಪುರ ತಾಲೂಕಿನ ೩೨ ಕಡೆ ತಪಾಸಣೆ ನಡೆಸಿದ ವೇಳೆ ೪ ಬಾಲಕರು ಪತ್ತೆಯಾಗಿದ್ದು ಇದರಲ್ಲಿ ಒಬ್ಬರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ನಾಗಮಂಗಲ ತಾಲೂಕಿನ ೨೯ ಕಡೆ ತಪಾಸಣೆ ನಡೆಸಿ ಇಬ್ಬರು ಬಾಲಕರನ್ನು ಪತ್ತೆಹಚ್ಚಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ೭೯ ಕಡೆ ತಪಾಸಣೆ ನಡೆಸಿ ೪ ಮಂದಿ ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಿ ಎರಡು ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.ಬಾಲ ಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತೀವ್ರ ನಿಗಾ ವಹಿಸಿರುವ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ ಅವರು ನಿರಂತರವಾಗಿ ತಪಾಸಣೆ ನಡೆಸುತ್ತಿರುವುದರಿಂದ ಬಾಲ ಕಾರ್ಮಿಕರು ಇದುವರೆಗೂ ಪತ್ತೆಯಾಗಿಲ್ಲ. ೧೪ ರಿಂದ ೧೮ ವರ್ಷ ವಯಸ್ಸಿನ ಕಿಶೋರ ಕಾರ್ಮಿಕರಷ್ಟೇ ಅಲ್ಲಲ್ಲಿ ಪತ್ತೆಯಾಗಿರುವುದರಿಂದ ಅವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಬಾಲ ಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರು ಪತ್ತೆಯಾದ ಸಮಯದಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ಕಾರ್ಪಸ್ ನಿಧಿಗೆ ಮಾಲೀಕರಿಂದ ೨೦ ಸಾವಿರ ರು. ದಂಡ ವಸೂಲಿ ಮಾಡಿ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಿದ್ದಾರೆ. ೧೧ ಬಾಲ ಕಾರ್ಮಿಕರನ್ನು ಕೆಲಸಕ್ಕಿರಿಸಿಕೊಂಡಿದ್ದ ಮಾಲೀಕರಿಂದ ಒಟ್ಟು ೨.೧೦ ಸಾವಿರ ರು. ಹಣ ವಸೂಲಿ ಮಾಡಿ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ. ಮಕ್ಕಳು ಯಾವ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಕಲಿಕೆ ಸಮಯದಲ್ಲಿ ಮಕ್ಕಳಿಂದ ಕೆಲಸ ಮಾಡಿಸುವುದು ಅಕ್ಷಮ್ಯ ಅಪರಾಧ. ಅಪಾಯಕಾರಿ ಸ್ಥಳಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಇದರ ನಡುವೆಯೂ ಗ್ಯಾರೇಜ್, ಬೇಕರಿ, ಆಲೆಮನೆ ಸೇರಿದಂತೆ ಇತರೆಡೆ ಹಲವು ಮಕ್ಕಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ತಪಾಸಣೆ ವೇಳೆ ಪತ್ತೆಯಾದ ೩೨ ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಅವರಿಗೆ ಸುರಕ್ಷತೆಯನ್ನೂ ಒದಗಿಸಿದ್ದೇವೆ.- ಡಾ.ಎಂ.ಸವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ