ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಿ

| Published : Oct 19 2025, 01:00 AM IST

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಡಿಸೆಂಬರ ತಿಂಗಳ ಅಂತ್ಯದೊಳಗೆ ಶಿಕ್ಷಕರು ಪಠ್ಯಕ್ರಮ ಪೂರ್ಣಗೊಳಿಸಲು ಮುಂದಾಗಬೇಕು.

ಯಲಬುರ್ಗಾ: ಮುಂಬರುವ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಸೂಚನೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ (ಪ್ರೌಢ ವಿಭಾಗ) ಕಾಲೇಜಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಪ್ರೌಢ ಶಾಲೆಗಳ ಮಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫಲಿತಾಂಶ ಸುಧಾರಣೆ ಕುರಿತು‌ ಕೈಗೊಂಡಿರುವ ಕಾರ್ಯಕ್ರಮಗಳ ಕ್ರಿಯಾ ಯೋಜನೆಯ ಪರಿಣಾಮಕಾರಿ ಅನುಷ್ಠಾನವಾಗಬೇಕು.ಜಿಲ್ಲೆಯಲ್ಲಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಪೂರ್ವತಯಾರಿ ನಡೆಸಬೇಕು. ಈ ಕುರಿತು ಶಾಲೆಗಳ ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮಟ್ಟ ಅಳೆಯಲು ಕಿರು ಪರೀಕ್ಷೆಗಳ ಮೂಲಕ ಫಲಿತಾಂಶ ಪರಾಮರ್ಶಿಸಬೇಕು. ಫಲಿತಾಂಶ ಸುಧಾರಣೆ ಬಗ್ಗೆ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇತರ ವಿದ್ಯಾರ್ಥಿಗಳಂತೆ ಅವರನ್ನೂ ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದರು.

ಡಿಸೆಂಬರ ತಿಂಗಳ ಅಂತ್ಯದೊಳಗೆ ಶಿಕ್ಷಕರು ಪಠ್ಯಕ್ರಮ ಪೂರ್ಣಗೊಳಿಸಲು ಮುಂದಾಗಬೇಕು.ತದ ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಶಿಕ್ಷಕರು ತಯಾರಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ತಂಡ ರಚನೆ ಮಾಡುವ ಮೂಲಕ ಪರಸ್ಪರ ಸಂವಹನ ಕ್ರಿಯೆ ನಡೆಸುವುದು ಸೂಕ್ತವಾಗಿದೆ. ವಿದ್ಯಾರ್ಥಿ ಹಾಗೂ ಪಾಲಕರ ಸಭೆ ಸಕಾಲದಲ್ಲಿ ಹಮ್ಮಿಕೊಳ್ಳುವ ಮೂಲಕ ತಮ್ಮ ತಮ್ಮ ಮಕ್ಕಳ ಫಲಿತಾಂಶ ಪೂರ್ವ ವಾಸ್ತವ ಸ್ಥಿತಿಗತಿ ಅರಿತು ಕೊಳ್ಳಲು ಸಹಾಯವಾಗಲಿದೆ ಎಂದರು.

ಪಾಲಕ-ಶಿಕ್ಷಕ-ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಪರಸ್ಪರ ಸಭೆಗಳು ನಡೆಯಬೇಕು. ಶಿಕ್ಷಕರು ಪರೀಕ್ಷಾ ಹಿತದೃಷ್ಠಿಯಿಂದ ತಾವು ದತ್ತು ಪಡೆದುಕೊಂಡ ಮಕ್ಕಳಿಗೆ ಓದಿನ ಬಗ್ಗೆ ಎಚ್ಚರಿಸಲು ಬೆಳಗಿನ ಕರೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭ ಬಿಇಒ ಅಶೋಕ ಗೌಡರ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಬಾಬುಸಾಬ ಲೈನದಾರ್‌, ಯಲಬುರ್ಗಾ ತಾಲೂಕು ಅಧ್ಯಕ್ಷ ಬಸವರಾಜ ಮಾಸ್ತಿ, ಕುಕನೂರು ತಾಲೂಕಾಧ್ಯಕ್ಷ ಎಸ್.ವಿ. ಬೆಣಕಲ್ ಹಾಗೂ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸಿದ್ದರು.