ಸಾರಾಂಶ
ಹಾನಗಲ್ಲ: ನಮ್ಮ ಪ್ರತಿಭೆಯನ್ನು ಪ್ರಜ್ವಲಗೊಳಿಸಿಕೊಂಡು ಉದ್ಯೋಗಪತಿಗಳಾಗಲು ಯುವಕರು ಮುಂದಾಗಬೇಕಲ್ಲದೆ, ಸಮಯವನ್ನು ದುಡಿಸಿಕೊಂಡು ಸಾರ್ಥಕ ಜೀವನ ಕಟ್ಟಿಕೊಳ್ಳಲು ಮುಂದಾಗಿ, ಉಪಕರಿಸಿದವರನ್ನು ಸ್ಮರಿಸಿ ಎಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು. ಶನಿವಾರ ಹಾನಗಲ್ಲ ಬಳಿಯ ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಮೊದಲು ನಮ್ಮದಾಗಬೇಕು. ಪರಿಶ್ರಮದಿಂದ ಎಲ್ಲವನ್ನೂ ಪಡೆಯಲು ಸಾಧ್ಯ. ಕಾಲ ಹರಣ ಸಲ್ಲದು. ಈ ನಾಡಿನ ರೈತ, ಸೈನಿಕ, ಶಿಕ್ಷಕರ ಸೇವೆಯನ್ನು ಸದಾ ಉಪಕಾರ ಮನೋಭಾವದಿಂದ ಸ್ಮರಿಸಬೇಕು. ನಿಮ್ಮಲ್ಲಿನ ಶಕ್ತಿಯನ್ನು ನೀವೇ ಅರಿಯಿರಿ. ಒಳ್ಳೆಯ ಹವ್ಯಾಸಗಳು ನಿಮ್ಮ ಬದುಕನ್ನು ಉನ್ನತಕ್ಕೇರಿಸಬಲ್ಲವು. ನಾಳೆಗಾಗಿ ನೀರು, ವಿದ್ಯುತ್ ಉಳಸಿ ಬಳಸುವ ಸಂಕಲ್ಪ ನಮ್ಮದಾಗಲಿ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಸಿ.ಎಸ್. ಕುಮ್ಮೂರ, ಶಿಸ್ತು ಜೀವನದ ಆಸ್ತಿ. ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಂಡ ಶಿಸ್ತು ಜೀವನದುದ್ದಕ್ಕೂ ನಮ್ಮ ನಡೆ ನುಡಿ ಆಚಾರಗಳನ್ನು ಶುದ್ಧವಾಗಿರಿಸುತ್ತದೆ. ಎಲ್ಲ ಕಾಲಕ್ಕೂ ಸಲ್ಲುವ ಸಮಾಜಮುಖಿ ಚಿಂತನೆಗಳಿಂದ ನಮ್ಮ ವ್ಯಕ್ತಿತ್ವವೇ ವಿಶಾಲವಾಗುತ್ತದೆ. ನಾಳೆಗಳಿಗಾಗಿ ಇಂದೇ ಶ್ರದ್ಧೆಯಿಂದ ಕಾಲದ ಪ್ರಜ್ಞೆಯಿಂದ ಸಾಗೋಣ. ಎಲ್ಲವೂ ನಮ್ಮ ಕೈಯಲ್ಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ, ನಡೆ ನುಡಿಯ ಸಾಮ್ಯತೆ ನಮ್ಮದಾಗಲಿ. ಶಿಕ್ಷಣ ಬದುಕಿನ ಸಾಕ್ಷಾತ್ಕಾರಕ್ಕೆ ಶಕ್ತಿ. ಈಗ ನಮಗೆ ಮೌಲ್ಯದ ಶಿಕ್ಷಣ ಬೇಕಾಗಿದೆ. ಜೀವನ ಕೌಶಲ್ಯವನ್ನು ಬೆಳೆಸಿಕೊಂಡಲ್ಲಿ ನಮ್ಮ ಭವಿಷ್ಯ ಉಜ್ವಲಗೊಳ್ಳಬಲ್ಲದು ಎಂದರು. ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಪೈರೋಜ ಶಿರಬಡಗಿ, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಆರ್.ವೇದಂಬಟ್ಟನವರ ಮಾತನಾಡಿದರು. ಪ್ರೊ.ಜೆ.ನಯನಾ, ಪ್ರೊ. ಸಂತೋಷಗೌಡ, ರಿಯಾಜಅಹಮ್ಮದ್ ಮಿಠಾಯಿಗಾರ, ಜಗದೀಶ ಸಿಂಧೂರ, ವೀರಣ್ಣ ಹಿರೇಮಠ, ಡಿಗ್ಗಪ್ಪ ಲಮಾಣಿ ಅತಿಥಿಗಳಾಗಿದ್ದರು. ಪ್ರಥಮ ಬಿ.ಎ ವಿದ್ಯಾರ್ಥಿ ಎಂ.ಎಂ.ರಾಕೇಶ ಮಾತನಾಡಿದರು. ಜಿ.ವಿ. ಭೂಮಿಕಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರೊ.ಎಚ್.ಡಿ. ವಿಜಯಕುಮಾರ ಸ್ವಾಗತಿಸಿದರು. ಪ್ರೊ.ಬಿ.ಎಂ. ಶಿವಕುಮಾರ ಆಶಯ ನುಡಿ ನುಡಿದರು. ಪ್ರೊ. ತಿಪ್ಪಣ್ಣ ಬಾರ್ಕೆರ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಗಿರಿಧರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))