ನರೇಗಾ ಯೋಜನೆ ಲಾಭ ಪಡೆಯಿರಿ

| Published : Nov 07 2025, 02:30 AM IST

ಸಾರಾಂಶ

ನರೇಗಾದಡಿ ಕೂಲಿಕಾರರು ನಾನಾ ಕಾಮಗಾರಿ ನಿರ್ವಹಿಸಲು ೨೦೨೬-೨೭ನೇ ಸಾಲಿನ ಕ್ರಿಯಾ ಯೋಜನೆ ಸಿದ್ದಪಡಿಸಲು ವಾರ್ಡ್ ಹಾಗೂ ಗ್ರಾಮ ಸಭೆ

ಯಲಬುರ್ಗಾ: ಗ್ರಾಮೀಣ ಜನರ ಜೀವನೋಪಾಯಕ್ಕೆ ಆಧಾರವಾಗಿರುವ ನರೇಗಾ ಯೋಜನೆಯ ಲಾಭ ಪಡೆಯಬೇಕು ಎಂದು ಪಿಡಿಒ ಹನುಮಂತರಾಯ ಯಂಕಂಚಿ ಹೇಳಿದರು.

ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ೨೦೨೬-೨೭ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಾರ್ಷಿಕ ಕ್ರಿಯಾಯೋಜನೆ (ಆಯವ್ಯಯ) ಸಿದ್ಧಪಡಿಸಲು ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದರು.

ನರೇಗಾದಡಿ ಕೂಲಿಕಾರರು ನಾನಾ ಕಾಮಗಾರಿ ನಿರ್ವಹಿಸಲು ೨೦೨೬-೨೭ನೇ ಸಾಲಿನ ಕ್ರಿಯಾ ಯೋಜನೆ ಸಿದ್ದಪಡಿಸಲು ವಾರ್ಡ್ ಹಾಗೂ ಗ್ರಾಮ ಸಭೆ ಮಾಡಲಾಗುತ್ತಿದ್ದು, ಕೂಲಿಕಾರರು ವೈಯಕ್ತಿಕ ಕಾಮಗಾರಿಗಳ ಅರ್ಜಿ ಸಲ್ಲಿಸಬಹುದು. ಅಕುಶಲ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷದಲ್ಲಿ ನೂರು ದಿನಗಳ ಕೆಲಸ ಖಾತ್ರಿ ಪಡಿಸುತ್ತದೆ. ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ಒದಗಿಸುವುದರೊಂದಿಗೆ ಬಹುಬಾಳಿಕೆ ಆಸ್ತಿ ಸೃಜಿಸಲಾಗುತ್ತದೆ. ಹೀಗೆ ಸೃಜಿಸುವ ಆಸ್ತಿ ಪ್ರತಿವರ್ಷ ಅಕ್ಟೋಬರ್ ದಿಂದ ನವೆಂಬರ್‌ವರೆಗೆ ಗ್ರಾಪಂನಲ್ಲಿ ಕಾರ್ಮಿಕ ಆಯವ್ಯಯ ಸಿದ್ಧಪಡಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯ ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತಿದೆ ಎಂದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಯುಕ್ತದಾರ ತಂತ್ರಾಂಶ ಜಾರಿಗೆ ತಂದಿದ್ದು, ಈ ತಂತ್ರಾಂಶದಡಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿ ತೆಗೆದುಕೊಳ್ಳಲು ನ. ೩೦ ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ವಾರ್ಡ್ ಸಭೆಯಲ್ಲಿ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯಲ್ಲಿ ರೈತರಿಂದ ಅರ್ಜಿ ಸ್ವೀಕರಿಸಲಾಯಿತು.

ಈ ಸಂದರ್ಭ ಗ್ರಾಪಂ ಸದಸ್ಯರಾದ ಅಮರೇಶ ಜಾಲಿಹಾಳ, ಸಂಗನಗೌಡ ಕೆಂಚಮ್ಮನವರ, ಎಸ್‌ಡಿಎ ಹನುಮಂತಪ್ಪ ಮ್ಯಾಗೇರಿ, ಕಾರ್ಯದರ್ಶಿ ಶರಣಪ್ಪ ಆಗೋಲಿ, ಕರವಸೂಲಿಗಾರ ಹನುಮಂತಪ್ಪ ಹರಿಜನ, ಸಮುದಾಯ ತಾಂತ್ರಿಕ ಸಹಾಯಕ ಈರಣ್ಣ ಹಳ್ಳಿ, ಗ್ರಾಮ ಕಾಯಕ ಮಿತ್ರ ಯಮನಮ್ಮ ಹಾಗೂ ಕಾಯಕ ಬಂಧುಗಳು, ರೈತರು, ಗ್ರಾಮಸ್ಥರು ಇದ್ದರು.