ನವಜಾತ ಅವಳಿ ಶಿಶುಗಳ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

| Published : Nov 07 2025, 02:30 AM IST

ಸಾರಾಂಶ

ಹೊಸಪೇಟೆ ನಗರದ 60 ಹಾಸಿಗೆ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಅವಳಿ ನವಜಾತ ಶಿಶುಗಳು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಬಾಣಂತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಹೊಸಪೇಟೆ: ನಗರದ 60 ಹಾಸಿಗೆ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಅವಳಿ ನವಜಾತ ಶಿಶುಗಳು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಬಾಣಂತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಹಗರಿಬೊಮ್ಮನಹಳ್ಳಿಯ ಪರ್ವೀನ್ ಬಾನು (26) ಅವರ ಅವಳಿ ನವಜಾತ ಶಿಶುಗಳು ಮೃತಪಟ್ಟಿವೆ.

ಪರ್ವೀನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಗರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಆದರೆ, ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಸ್ಕ್ಯಾನಿಂಗ್‌ಗಾಗಿ ನಮ್ಮನ್ನು ಸುತ್ತಾಡಿಸಿದ್ದಾರೆ. ಹೆರಿಗೆ ನೋವಿನಲ್ಲೇ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ತೆರಳುವಂತಾಯಿತು. ವೈದ್ಯರು ಬಂದು ನೋಡಿದ್ದರೆ, ಅವಳಿ ಮಕ್ಕಳು ಉಳಿಯುತ್ತಿದ್ದರೂ ಎಂದು ಬಾಣಂತಿ ಸಂಬಂಧಿಕರು ದೂರಿದ್ದಾರೆ. ಅಲ್ಲದೇ, ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೂ ದೂರು ಸಲ್ಲಿಸಿದ್ದಾರೆ.

ಆಗಿದ್ದೇನು?: ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಹೆರಿಗೆ ಮಾಡಿಸಲಾಗಿದ್ದು, 1200 ಗ್ರಾಂ ತೂಕ ಇದ್ದ ಹಸುಳೆಯೊಂದು ಹೊಟ್ಟೆಯಲ್ಲೇ ಮೃತಪಟ್ಟಿದೆ. 1400 ಗ್ರಾಂ ತೂಕ ಇದ್ದ ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ದಾರಿ ಮಧ್ಯೆ ಈ ಹಸುಳೆ ಕೂಡ ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟಿದೆ.

ನನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವೆ. ಭಾರೀ ಹೆರಿಗೆ ನೋವು ಇತ್ತು. ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷಿಸಿದರು. ಆಸ್ಪತ್ರೆ ಸಿಬ್ಬಂದಿ ಕೂಡ ಸರಿಯಾಗಿ ಸ್ಪಂದಿಸಿಲ್ಲ. ನನಗೆ ನೋವಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಸ್ಕ್ಯಾನಿಂಗ್‌ ರಿಪೋರ್ಟ್‌ ಕೂಡ ಸರಿಯಾಗಿ ನೋಡಿಲ್ಲ. ಸಿಬ್ಬಂದಿಯಿಂದ ಮೊಬೈಲ್ ಚಾರ್ಜರ್ ತರಿಸಿಕೊಂಡ ವೈದ್ಯರು, ನನ್ನ ನೋಡಲಿಲ್ಲ. ಇವರ ನಿರ್ಲಕ್ಷ್ಯಕ್ಕೆ ಅವಳಿ ಮಕ್ಕಳನ್ನು ಕಳೆದುಕೊಳ್ಳುವಂತಾಯಿತು ಎಂದು ಪರ್ವಿನ್ ಬಾನು ದೂರಿದರು.

ಹಗರಿಬೊಮ್ಮನಹಳ್ಳಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆ ಮಾಡಿಸಲು ಅನಸ್ತೇಶಿಯಾ ವೈದ್ಯರು ಇಲ್ಲವೆಂದು ಹೊಸಪೇಟೆಗೆ ಕಳುಹಿಸಲಾಗಿತ್ತು. ಇಲ್ಲಿಗೆ ಬುಧವಾರ ಒಂದು ಗಂಟೆ ಹೊತ್ತಿಗೆ ಬಂದಿದ್ದೇವೆ. ಹೀಗಿದ್ದರೂ ಸಂಜೆ 7 ಗಂಟೆಗೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಕಳುಹಿಸಲಾಯಿತು. ನಾವು ಸ್ಕ್ಯಾನಿಂಗ್ ಮಾಡಿಸಿಕೊಂಡು ಬಂದ ಬಳಿಕವೂ ಚಿಕಿತ್ಸೆ ಕೊಟ್ಟಿಲ್ಲ. ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ರಾತ್ರಿ 11 ಗಂಟೆಗೆ ಹೆರಿಗೆಗೆ ತೆಗೆದುಕೊಂಡು ಹೋಗಿದ್ದಾರೆ. ಒಂದು ಮಗು ಹೊಟ್ಟೆಯಲ್ಲೇ ಮೃತಪಟ್ಟಿದ್ದು, ಇನ್ನೊಂದು ಮಗುವಿಗೆ ಉಸಿರಾಟದ ತೊಂದರೆ ಇದೆ ಎಂದು ಕೊಪ್ಪಳಕ್ಕೆ ಕರೆದುಕೊಂಡು ಹೋಗಲು ಹೇಳಿದರು. ಆ್ಯಂಬುಲೆನ್ಸ್ ಕೂಡ ಅರ್ಧ ತಾಸು ತಡವಾಗಿ ಬಂದಿದೆ. ದಾರಿ ಮಧ್ಯೆ ಆ ಮಗು ಕೂಡ ಮೃತಪಟ್ಟಿದೆ. ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ಪರ್ವೀನ್‌ ಬಾನು ತಂದೆ ಅಲ್ಲಾಭಕ್ಷಿ ಆಗ್ರಹಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ವೈದ್ಯರು ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ಈ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ ಎಂದು ಹೊಸಪೇಟೆ ಭಗತ್‌ ಸಿಂಗ್‌ ರಕ್ತದಾನಿಗಳ ಸಂಘದ ಕೆ.ಎಂ. ಸಂತೋಷ್‌ ಕುಮಾರ್‌ ಹೇಳಿದರು.

ಹಗರಿಬೊಮ್ಮನಹಳ್ಳಿಯ ಪರ್ವೀನ್‌ ಬಾನು ಅವರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದ್ದು, ಒಂದು ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಇನ್ನೊಂದು ಮಗು ಕೊಪ್ಪಳಕ್ಕೆ ಆ್ಯಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುವಾಗ ಮೃತಪಟ್ಟಿದೆ. ಅವಧಿ ಪೂರ್ವ ಹೆರಿಗೆ ಆಗಿದೆ. ಜತೆಗೆ ಕಡಿಮೆ ತೂಕದ ಮಕ್ಕಳಿದ್ದವು. ನವಜಾತ ಶಿಶುಗಳಿಗೆ ಹೃದಯ ಸಂಬಂಧಿ ತೊಂದರೆಯೂ ಇರಬಹುದು. ಒಂದು ಮಗು ನೀಲಿ ಬಣ್ಣಕ್ಕೆ ತಿರುಗಿ ಮೃತಪಟ್ಟಿದೆ ಎಂದು ಹೇಳಲಾಗಿದೆ. ಈ ಕುರಿತು ನಿಖರ ವರದಿ ಪಡೆಯಲಾಗುವುದು ಎಂದು ಹೊಸಪೇಟೆ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹರಿಪ್ರಸಾದ್‌ ಹೇಳಿದರು.