ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿದ್ಯಾವಂತರು, ಶಿಕ್ಷಿತರ ಮಧ್ಯೆ ಇರುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಅವಕಾಶ ಇದೆ ಎಂದು ಶಿಕ್ಷಣ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು. ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜನಮಿತ್ರ ಆಯೋಜಿಸಿರುವ ಎರಡು ದಿನಗಳ ಎಕ್ಸ್‌ಪೋಗೆ ಶನಿವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.ನಾನು ಯಾವುದೇ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ನನಗೆ ಅಕ್ಷರಜ್ಞಾನ ಇಲ್ಲ, ೧೯೭೨ರ ದಶಕದಿಂದಲೂ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಕಿತ್ತಲೆಹಣ್ಣು ಮಾರುತ್ತಿರುವ ನನಗೆ ಅದೊಂದು ದಿನ ಇಂಗ್ಲಿಷ್ ಗೊತ್ತಿಲ್ಲದೆ ಆದ ಮುಜುಗರದಿಂದ ಶಾಲೆ ತೆರೆದು ನನ್ನೂರಿನ ಮಕ್ಕಳಿಗೆ ಅಕ್ಷರ ಕಲಿಸಬೇಕೆಂಬ ಸಂಕಲ್ಪ ಮಾಡಿದೆ. ನನ್ನ ಪ್ರಯತ್ನ, ಹಾಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ತಂದೆ ಮೊದಲಾದವರ ಸಹಕಾರದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ನಂತರ ಇದೀಗ ಕಾಲೇಜು ಶಿಕ್ಷಣ ಆರಂಭಿಸಬೇಕೆಂಬ ಆಸೆ ಇದೆ. ಈಗಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಇದ್ದು, ಸಾಧನೆ ಮಾಡಲು ಒಳ್ಳೆಯ ಅವಕಾಶವಿದ್ದು, ಅದನ್ನು ಮಾಡಿ ತೋರಿಸಿ ಎಂದು ಕಿವಿಮಾತು ಹೇಳಿದರು. ನಾನು ಎಂದೂ ಕುವೆಂಪು ವಿಶ್ವವಿದ್ಯಾನಿಲಯ ನೋಡಿಲ್ಲ, ಆದರೆ ವಿವಿ ಪಠ್ಯಗಳಲ್ಲಿ ನನ್ನ ವಿಚಾರ ಅಳವಡಿಸಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮ, ಇಂಥ ಎಕ್ಸ್‌ಪೋಗಳನ್ನು ಬೆಂಗಳೂರು, ಮೈಸೂರು ಕಡೆ ನೋಡುತ್ತಿದ್ದೆವು. ಇದೀಗ ನಮ್ಮ ಹಾಸನದಲ್ಲೇ ಆಗಿರುವುದು ಹೆಮ್ಮೆಯ ವಿಚಾರ. ಇದನ್ನು ಆಯೋಜನೆ ಮಾಡಿರುವ ಜನಮಿತ್ರ ಬಳಗಕ್ಕೆ ಧನ್ಯವಾದ ಹೇಳಿದರು. ಬೇರೆ ಬೇರೆ ಕಡೆಗಳಿಂದಲೂ ಶಿಕ್ಷಣ ಸಂಸ್ಥೆಗಳು ಬಂದಿವೆ. ಇದರಿಂದ ಓದುವ ಮಕ್ಕಳಿಗೆ ಅನುಕೂಲ ಆಗಲಿದೆ. ಜನಮಿತ್ರ ಸುದ್ದಿ ಜೊತೆಗೆ ಸಮಾಜ ಸೇವೆಯನ್ನೂ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹಾಸನ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ, ಇದು ನಿಜಕ್ಕೂ ವಿಭಿನ್ನ ಆಲೋಚನೆ, ಮುಂದೆಯೂ ನಡೆದು ಎಲ್ಲರೂ ಲಾಭ ಪಡೆಯುವಂತಾಗಲಿ ಎಂದು ಆಶಿಸಿದರು. ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಂಪಾದಕ ಎಚ್.ಬಿ.ಮದನಗೌಡ, ನಮ್ಮ ಪ್ರಥಮ ಪ್ರಯತ್ನಕ್ಕೆ ಸಹಕಾರ ನೀಡಿದ ಸುಮಾರು ೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಧನ್ಯವಾದ ಹೇಳಿದರು. ಕೃ.ನಾ.ಮೂರ್ತಿ ಅವರು ಹುಟ್ಟುಹಾಕಿದ ಪತ್ರಿಕೆಯನ್ನು ೧೫ ವರ್ಷದಿಂದ ನಾನು ಮುನ್ನಡೆಸುತ್ತಿದ್ದು, ನವೀನ್ ಅವರು ನನ್ನ ಜೊತೆಯಾದ ನಂತರ ಹೊಸತನ, ಹೊಸ ಪ್ರಯತ್ನ ಸಾಧ್ಯವಾಗಿದೆ. ಮುಂದೆಯೂ ಪತ್ರಿಕೆ ಹೆಸರಿನಲ್ಲಿ ವಿಭಿನ್ನ ಕಾರ್ಯಕ್ರಮ ಮಾಡುವ ಆಲೋಚನೆ ಇದೆ ಎಂದರು.
ಈ ವೇಳೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಕೆಂಚೇಗೌಡ, ಹಾಸನ ಅನುದಾನರಹಿತ ಶಾಲೆಗಳ ಆಡಳಿತ ಸಂಘದ ಅಧ್ಯಕ್ಷ ಬಿ.ಇ.ಶಿವರಾಮೇಗೌಡ, ವಿದ್ಯಾಸೌಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಂಜೇಗೌಡ, ಜನಮಿತ್ರ ವ್ಯವಸ್ಥಾಪಕ ಸಂಪಾದಕ ಸಿ.ಆರ್.ನವೀನ್, ವಿಜಯಶಾಲೆ ಮುಖ್ಯಸ್ಥರಾದ ತಾರಾ ಸ್ವಾಮಿ, ಚೇತನ್ ರಾಮ್ ಮೊದಲಾದವರಿದ್ದರು.