ಸಾರಾಂಶ
ಗದಗ: ಇಂದಿನ ಯುವಕರಲ್ಲಿ ದೇಶಭಕ್ತಿ, ತ್ಯಾಗ ಗುಣ ಇಲ್ಲದಾಗಿವೆ. ಯುವ ಜನತೆಯಲ್ಲಿ ದೇಶಾಭಿಮಾನ, ದೇಶಭಕ್ತಿ ಗುಣ ಬೆಳೆಸಬೇಕಾಗಿದೆ, ಅಂತಹ ಪರಿಸರ ನಿರ್ಮಿಸಬೇಕಾಗಿದೆ. ದೇಶಾಭಿಮಾನ, ದೇಶಭಕ್ತಿ ಗುಣ ಯುವಕರಲ್ಲಿ ಜಾಗೃತವಾದರೆ ನಮ್ಮ ನಾಡು ಶಕ್ತಿ ಶಾಲಿಯಾಗಿ ಅಭಿವೃದ್ಧಿ ಹೊಂದುವಲ್ಲಿ ಸಂದೇಹವಿಲ್ಲ. ಈ ದಿಸೆಯಲ್ಲಿ ಯುವ ಜನಾಂಗದ ದೇಶಭಕ್ತಿ ರಾಷ್ಟ್ರದ ಅದ್ವಿತೀಯ ಶಕ್ತಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಬಸವರಾಜ ತೋಟಗೇರ ಹೇಳಿದರು.
ನಗರದ ಬಸವ ಯೋಗ ಮಂದಿರದಲ್ಲಿ ಎಸ್.ವೈ.ಬಿ.ಎಂ.ಎಸ್ ಯೋಗ ಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದಿಂದ ಜರುಗಿದ ನೇತಾಜಿ ಸುಭಾಸಚಂದ್ರ ಬೋಸ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.ದೇಶ ಸ್ವಾತಂತ್ರ‍್ಯ ಪಡೆಯುವುದಕ್ಕಾಗಿ ಶ್ರಮಿಸಿದ ಅನೇಕ ಮಹೋನ್ನತ ಮಹನೀಯರಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸರ ಶ್ರಮ ಹೆಚ್ಚು ಸಾರ್ಥಕವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಲು ನೇತಾಜಿ ಹೆಚ್ಚಾಗಿ ಯುವಕರನ್ನು ಹುರುದುಂಬಿಸಿದರು. ಅಂದು ಅವರು ಯುವಕರಿಗೆ ನನಗೆ ನೀವು ರಕ್ತ ನೀಡಿ, ನಾನು ನಿಮಗೆ ಸ್ವಾತಂತ್ರ‍್ಯ ನೀಡುತ್ತೇನೆ ಎಂದು ಹೇಳಿದಂತೆ ಇಂದು ನಾವು ಯುವಕರೆ ನೀವು ಸುಸಂಸ್ಕೃತರಾಗಿರಿ ನಾವು ನಿಮಗೆ ಸುಖ ಜೀವನ ನೀಡುತ್ತೇವೆ ಎಂದು ಹೇಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಯಾವುದೇ ಕಾರ್ಯ ಯಶಸ್ಸಿಗೆ ಶಿಕ್ಷಣ (ಅರಿವು) ಭದ್ರ ಬುನಾದಿಯಾಗಿದೆ. ಇಂದು ತಂತ್ರಜ್ಞಾನದ ಭರಾಟೆಯಲ್ಲಿ ತತ್ವಾದರ್ಶ ಮರೆಯಾಗುತ್ತಲಿವೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ನಾವು ನೈತಿಕ ಶಿಕ್ಷಣ, ಯೋಗ ಶಿಕ್ಷಣ ಪರಿಚಯಿಸಿದರೆ ಇಂದಿನ ಮಕ್ಕಳು ನಾಳಿನ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದರು.ಈ ವೇಳೆ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಹಾಗೂ ಅಬಿದಾ ಶೇಖ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯೋಗ ಪಾಠಶಾಲೆಯ ವಿದ್ಯಾರ್ಥಿಗಳು ಇನ್ನಿತರೆ ಗಣ್ಯಮಾನ್ಯರು ಇದ್ದರು. ರಾಜೇಶ್ವರಿ ಭಾಂಡಗೆ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಮೇಕಳಿ ಸ್ವಾಗತಿಸಿದರು. ಶಿಕ್ಷಕ ಬೀಸಪ್ಪ. ಬಿ ನಿರೂಪಿಸಿ, ವಂದಿಸಿದರು.