ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಸಂಬಂಧಪಟ್ಟ ಸ್ಥಳೀಯ ನಗರ ಹಾಗೂ ಗ್ರಾಮೀಣ ಸಂಸ್ಥೆಯ ಅಧಿಕಾರಿಗಳು, ಪಶುಪಾಲನಾ ಇಲಾಖೆಯ ಪಶು ವೈದ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಪ್ರಾಣಿ ಸಂತಾನ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಸಂಚಾರಿ ಪಶು ಚಿಕಿತ್ಸಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅನಿಯಂತ್ರಿತ ನಾಯಿಗಳ ಸಂತಾನ ಉತ್ಪತ್ತಿಯಿಂದ ಜಿಲ್ಲೆಯಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಜನರು ಮನೆಯಿಂದ ಹೊರ ಬರುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕವಾಗಿ ಇದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದ್ದು, ಈ ಪರಿಸ್ಥಿತಿ ನಿಯಂತ್ರಿಸುವುದು ಅತಿ ಅವಶ್ಯಕವಾಗಿದೆ. ಸ್ಥಳೀಯ ನಗರ ಹಾಗೂ ಗ್ರಾಮೀಣ ಸಂಸ್ಥೆಗಳು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ತುರ್ತಾಗಿ ಬೀದಿನಾಯಿಗಳ ಸಂತಾನ ನಿಯಂತ್ರಣ(ಎಬಿಸಿ) ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.ಬರುವ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಕಚ್ಚುವಿಕೆ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಆಯಾ ವ್ಯಾಪ್ತಿಯ ಸಂಬಂಧಿಸಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗೋಶಾಲೆಗಳಿಗೆ ಭೇಟಿ ನೀಡಿ: ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆ ಹಾಗೂ ಮೂರು ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಗೋಶಾಲೆಯಲ್ಲಿನ ಜಾನುವಾರುಗಳನ್ನು ಮಾರ್ಗಸೂಚಿಗಳನ್ವಯ ಮಾನವೀಯ ದೃಷ್ಟಿಯಿಂದ ಸೂಕ್ತವಾಗಿ ನಿರ್ವಹಣೆ ಮಾಡಬೇಕೆಂದು ಸಂಬಂಧಿಸಿದವರಿಗೆ ಸೂಚಿಸಿದರು. ಈ ಗೋಶಾಲೆಗಳ ಕಾರ್ಯನಿರ್ವಹಣೆ ಬಗ್ಗೆ ಸಂಬಂಧಪಟ್ಟ ಪಶುವೈದ್ಯಾಧಿಕಾರಿ ಹಾಗೂ ಪ್ರಾಣಿ ದಯಾ ಸಂಘದ ಒಬ್ಬ ಸದಸ್ಯರು ಪ್ರತಿ 15 ದಿನಕ್ಕೊಮ್ಮೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ವರದಿಯನ್ನು ನೀಡುವಂತೆ ಸೂಚಿಸಿದರು.ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಮಾತನಾಡಿ, ಸಂತಾನ ನಿಯಂತ್ರಣ ಕಾರ್ಯಕ್ರಮದಡಿ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಕೈಗೊಂಡು, ಶಸ್ತ್ರ ಚಿಕಿತ್ಸೆಯ ನಂತರದಲ್ಲಿ ಮೂರು ದಿನಗಳವರೆಗೆ ಸೂಕ್ತ ಚಿಕಿತ್ಸೆ ನೀಡಿ, ರೇಬಿಸ್ ಲಸಿಕೆ ಹಾಕಿ ಅವುಗಳು ಮೊದಲಿದ್ದ ಜಾಗದಲ್ಲಿ ಬಿಟ್ಟು ಬರುವುದರ ಬಗ್ಗೆ ಮಾಹಿತಿ ನೀಡಿದರು.ವಿಶ್ವ ರೇಬಿಸ್ ದಿನದ ಅಂಗವಾಗಿ ಸೆ. 28ರಂದು ಜಿಲ್ಲಾದ್ಯಂತ ರೇಬಿಸ್ ಲಸಿಕಾ ಕಾರ್ಯಕ್ರಮ ಹಾಗೂ ರೇಬಿಸ್ ಜಾಗೃತಿ ಶಿಬಿರಗಳನ್ನು ಶಾಲೆಗಳಲ್ಲಿ ಮತ್ತು ಸಾರ್ವಜನಿಕರಿಗೆ ಹಮ್ಮಿಕೊಳ್ಳುವಂತೆ ತಿಳಿಸಿದರು.ಕರಪತ್ರ ಬಿಡುಗಡೆ: ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಂಜಾಗೃತ ಕ್ರಮವಾಗಿ ಶ್ವಾನಗಳ ಗುಣಲಕ್ಷಣಗಳ ಪರಿಚಯ ಹಾಗೂ ರೇಬಿಸ್ ರೋಗದ ಮುಂಜಾಗೃತಾ ಕ್ರಮ ಕುರಿತು ಕರಪತ್ರಗಳ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.