ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಗರ್ಭಿಣಿಯರ ನೋಂದಣಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು. ಅವಧಿಗೆ ಮುನ್ನ ಹೆರಿಗೆಯಾಗುತ್ತಿರುವ ಬಗ್ಗೆ ಕಾರಣಗಳನ್ನು ತಿಳಿದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಖಡಕ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯಲ್ಲಿ ಗರ್ಭಿಣಿಯರ ನೋಂದಣಿ, ಅವಧಿಗೆ ಮುನ್ನ ಹೆರಿಗೆ ಪ್ರಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರ ನೋಂದಣಿಗೆ ಆದ್ಯತೆ ನೀಡುವಂತೆ ಹಾಗೂ ಆರೋಗ್ಯ ಇಲಾಖೆ ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ಆಶಾ ಕಾರ್ಯಕರ್ತರಿಗೆ ಸೂಚನೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಆರೋಗ್ಯದ ಬಗ್ಗೆ ವಿಚಾರಣೆ ಮಾಡಬೇಕು. ಯಾರಿಗೂ ಕೆಲಸದಲ್ಲಿ ಆಸಕ್ತಿ ಕಾಣುತ್ತಿಲ್ಲ. ಬರುವ ದಿನಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸರ್ಕಾರದ ಆರೋಗ್ಯ ಯೋಜನೆಗಳು ಎಲ್ಲರಿಗೂ ತಲುಪಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಮುಖ್ಯವಾಗಿದೆ. ಎಲ್ಲರೂ ಅತ್ಯಂತ ಕಾಳಜಿಯಿಂದ ಹಾಗೂ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅವರಿಗೆ ಕಾಲಕಾಲಕ್ಕೆ ಅಗತ್ಯ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡುವ ಜತೆಗೆ ಆರೋಗ್ಯ ಶಿಕ್ಷಣ ನೀಡಬೇಕು. ತುರ್ತು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬೇರೆ ಆಸ್ಪತ್ರೆಗೆ ಕಳುಹಿಸುವ ಮೊದಲು ಅಗತ್ಯ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಚುಚ್ಚುಮದ್ದು, ಔಷಧಿಗಳು ಹಾಗೂ ಮಾತ್ರೆಗಳು, ನಾಯಿಕಡಿತ ಹಾಗೂ ಹಾವು ಕಡಿತಕ್ಕೆ ನೀಡುವ ಚುಚ್ಚುಮದ್ದುಗಳ ದಾಸ್ತಾನು ಮಾಡಿಕೊಳ್ಳಬೇಕು. ಬಡವರಿಗೆ ಅಗತ್ಯ ಆರೋಗ್ಯ ಸೇವೆ ಸಿಗುವಂತಾಗಬೇಕು ಎಂದರು.ನೋಟಿಸ್ ನೀಡಿ: ಸಾರ್ವಜನಿಕ ವಲಯದಲ್ಲಿ ಡೆಂಘೀ ಲಾರ್ವಾ ಉತ್ಪತ್ತಿ ಸ್ಥಾನಗಳು ಕಂಡುಬಂದಲ್ಲಿ ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ, ಡಾ. ನೀಲೇಶ, ಡಾ. ಜಗದೀಶ ಪಾಟೀಲ, ಡಾ. ಚನ್ನವೀರಯ್ಯ ವಿರಕ್ತಮಠ, ಹಾವೇರಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಸೇರಿದಂತೆ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.