ಡಿ.15ರಂದು ಸೋಮವಾರ ನ್ಯಾಯಾಲಯ ಮತ್ತು ಪ್ರಾಧಿಕಾರದ ಆದೇಶದಂತೆ ಟಿಎಪಿಸಿಎಂಎಸ್ ಫಲಿತಾಂಶ ಪ್ರಕಟಣೆಗೊಂಡಿತು. ಐದು ವರ್ಷಗಳ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ ಕುರಹಟ್ಟಿ ಮಹೇಶ್ ತಂಡ ಭರ್ಜರಿ ಗೆಲುವು ಸಾಧಿಸಿದರೆ ನಿಕಟ ಪೂರ್ವ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಅವರ ತಂಡ ಪರಾಭವಗೊಂಡಿತು.
ಕನ್ನಡಪ್ರಭ ವಾರ್ತೆ ನಂಜನಗೂಡು
ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ 12ಕ್ಕೆ 12 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸುವ ಮೂಲಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಕಳೆದ ನ. 2 ರಂದು ಚುನಾವಣೆ ನಡೆದಿತ್ತು, ಒಟ್ಟಾರೆ 1012 ಮತಗಳಿದ್ದವು. ಆದರೆ ಸರ್ಕಾರದ ನಿಯಮಾವಳಿಯಂತೆ ಸಂಘದ ಜೊತೆಗೆ ವ್ಯವಹಾರ ನಡೆಸಲಾದ 412 ಜನರಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ದೊರಕಿತ್ತು. ಉಳಿದ 600 ಮಂದಿಗೆ ಮತದಾನದ ಹಕ್ಕು ದೊರಕಿರಲಿಲ್ಲ. 600 ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ದೊರಕಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ 1012 ಮತದಾರರು ಕೂಡ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆದರೆ ನ್ಯಾಯಾಲಯದ ತೀರ್ಪು ಹೊರಬರದ ಕಾರಣ 412 ಮತಗಳ ಎಣಿಕೆ ಕಾರ್ಯವನ್ನು ಮಾತ್ರ ನಡೆಸಲಾಗಿತ್ತು.
ಡಿ.15ರಂದು ಸೋಮವಾರ ನ್ಯಾಯಾಲಯ ಮತ್ತು ಪ್ರಾಧಿಕಾರದ ಆದೇಶದಂತೆ ಟಿಎಪಿಸಿಎಂಎಸ್ ಫಲಿತಾಂಶ ಪ್ರಕಟಣೆಗೊಂಡಿತು. ಐದು ವರ್ಷಗಳ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ ಕುರಹಟ್ಟಿ ಮಹೇಶ್ ತಂಡ ಭರ್ಜರಿ ಗೆಲುವು ಸಾಧಿಸಿದರೆ ನಿಕಟ ಪೂರ್ವ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಅವರ ತಂಡ ಪರಾಭವಗೊಂಡಿತು.ಕುರಹಟ್ಟಿ ಕೆಜಿಮಹೇಶ್ 285, ಎಸ್ಸಿ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ವಿಜಯ್ ಕುಮಾರ್ 205, ಎಸ್ಟಿ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ಸರ್ವೇಶ್ 191, ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಶಿವಕುಮಾರ್ 222, ಎನ್. ಶ್ರೀನಿವಾಸ್ 184, ಮಹಿಳಾ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ಎಚ್.ಎಂ. ಮಂಜುಳಾ ಮಧು 248, ಎನ್.ಎಂ. ಪವಿತ್ರ 197, ಬಿಸಿಎಂ ( ಎ) ಇಂದ ಸ್ಪರ್ಧಿಸಿದ್ದ ಆರ್. ಮಹದೇವು 170 ಮತಗಳನ್ನು ಪಡೆದು ವಿಜಯ ಸಾಧಿಸುವ ಮೂಲಕ ಟಿಎಪಿಸಿಎಂಎಸ್ ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.
ಅಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಎಚ್.ಜಿ. ಪರಶಿವಮೂರ್ತಿ, ಜಿ.ಕೆ. ಪ್ರಕಾಶ್, ಕೆ.ಎನ್. ಮಲ್ಲೇಶ್, ಟಿ.ಎನ್. ಗುರುಮಲ್ಲೇಶ್ ಅವಿರೋಧವಾಗಿ ಆಯ್ಕೆಯಾದರು.ಬಿಜೆಪಿ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎಸ್.ಎಂ. ಕೆಂಪಣ್ಣ, ಸಿ.ಎಂ. ಮಹದೇವಯ್ಯ, ಕೆ.ಎಂ. ನಾಗರಾಜು, ಎಚ್.ಎಸ್. ಮಹದೇವಸ್ವಾಮಿ, ಎಂ.ಪಿ. ನಟರಾಜು, ಎಚ್.ಕೆ. ಸವಿತಾ ರಂಗನಾಥ್, ಎಸ್. ಮಂಜುಳಾ ಪರಾಭವಗೊಂಡರು.
ಚುನಾವಣಾ ಅಧಿಕಾರಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಮತ್ತು ರಿಟರ್ನಿಂಗ್ ಆಫೀಸರ್ ವಸಂತ್ ಕುಮಾರ್ ಮಾತನಾಡಿ, ನ್ಯಾಯಾಲಯ ಮತ್ತು ಪ್ರಾಧಿಕಾರದ ಆದೇಶದಂತೆ ಚುನಾವಣೆಯ ಫಲಿತಾಂಶ ಪ್ರಕಟಿಸುತ್ತಿರುವುದಾಗಿ ಘೋಷಿಸಿದರು.ಅಧ್ಯಕ್ಷ ಕುರಟ್ಟಿ ಮಹೇಶ್ ಮಾತನಾಡಿ, ಆಡಳಿತ ಮಂಡಳಿ ಗೆ ನಡೆದ ಚುನಾವಣೆಯಲ್ಲಿ ಜಯ ದೊರಕಿಸಿದ ಮತದಾರರಿಗೆ ಕೃತಜ್ಞತೆಗಳು ಜೊತೆಗೆ. ಟಿಎಪಿಸಿಎಂಎಸ್ ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯಲು ಕಾರಣರಾದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ದರ್ಶನ್ ಧ್ರುವನಾರಾಯಣ್, ಸಂಸದ ಸುನಿಲ್ ಬೋಸ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹಾಗೂ ರೈತ ಮತದಾರರಿಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಸತೀಶ್ ಗೌಡ, ನಾಗರಾಜು, ಪರಶಿವಮೂರ್ತಿ, ಹೆಮ್ಮರಗಾಲ ಉಮೇಶ್, ಹಂಡುವಿನಹಳ್ಳಿ ಪರಶಿವಮೂರ್ತಿ ಮೊದಲಾದವರು ಇದ್ದರು.