ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸರ್ವ ಸದಸ್ಯರ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರು. ಲಾಭಗಳಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 50 ಲಕ್ಷ ರು. ಲಾಭಾಂಶ ಗಳಿಸುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ.ಮಹದೇವ್ ಹೇಳಿದರು.ಪಟ್ಟಣದ ಸಂಘದ ಆಡಳಿತ ಮಂಡಳಿ ಕಚೇರಿ ಆವರಣದಲ್ಲಿ ನಡೆದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ತಮ್ಮ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಸಂಘದ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಂಘದ ಹೆಸರಿನಲ್ಲಿ ಇರುವ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಆಸ್ತಿಗಳ ಅಗತ್ಯ ದಾಖಲೆ ಸಂಗ್ರಹಿಸುವ ಜೊತೆಗೆ ಆಸ್ತಿಗಳನ್ನು ಗುರುತಿಸಿ ತಂತಿ ಬೇಲಿ ನಿರ್ಮಿಸಿ ಭದ್ರತೆ ಮಾಡುವುದರೊಂದಿಗೆ ಭವಿಷ್ಯದಲ್ಲಿ ಯಾವುದೇ ತೊಡಕು ಉಂಟಾಗದಂತೆ ಎಚ್ಚರ ವಹಿಸಲಾಗಿದೆ. ಸಹಕಾರ ಸಂಘದ ಮಳವಳ್ಳಿ ರಸ್ತೆಯಲ್ಲಿನ ನಿವೇಶನದಲ್ಲಿ ಏಳು ಅಂಗಡಿ ಮಳಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಆನಂತರ ಮಳಿಗೆಗಳ ಮೊದಲನೇ ಅಂತಸ್ತಿನಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿ ನಡೆಸಲು ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.ಪ್ರಸ್ತುತ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ಕಾರ್ಮಿಕ ಇಲಾಖೆ, ಅಬಕಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಸರ್ಕಾರದ ನಿಯಮದ ಅನುಸಾರ ಬಾಡಿಗೆ ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಮಳವಳ್ಳಿ ರಸ್ತೆಯಲ್ಲಿದ್ದ ಗೋದಾಮನ್ನು ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಮಾಲೀಕತ್ವದ ಡೆಕ್ಕನ್ ಆಗ್ರೋ ಕಂಪನಿ ಗೆ ಬಾಡಿಗೆ ಇಡಲಾಗಿತ್ತು. ಕಂಪನಿ ಕಳೆದ ಎರಡು ವರ್ಷಗಳಿಂದ ಬಾಡಿಗೆ ಪಾವತಿಸದ ಕಾರಣ ನೋಟಿಸ್ ನೀಡಲಾಗಿತ್ತು. ಕಂಪನಿ ಈಗ ಬಾಡಿಗೆ ಪಾವತಿ ಮಾಡಿದ್ದು ಸಂಘದ ಖಾತೆಗೆ ಜಮಾ ಆಗಿದೆ. ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ ಮಾಡಲಿದೆ ಎಂದು ಸಭೆಗೆ ವಿವರಿಸಿದರು.ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕರಾದ ಹೊನ್ನೇಗೌಡ, ಕೆ.ಟಿ.ಶೇಖರ, ಶಂಕರ ಲಿಂಗಯ್ಯ, ಕರಿಯಪ್ಪ, ಚಂದ್ರನಾಯಕ, ಜೈ ಕೃಷ್ಣ, ಸುಧಾ, ಅಮೂಲ್ಯ, ಕೆ.ಎಚ್.ಇಂದಿರಾ, ಗೌರಮ್ಮ, ಸರ್ಕಾರದ ನಾಮನಿರ್ದೇಶಕ ಟಿ.ಗೋಪಿ, ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಪಿ.ಸಂದರ್ಶ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಅನಿತಾ, ಪ್ರಭಾರ ಸಿಇಓ ಯೋಗಾನಂದ ಇದ್ದರು.