ಹೊಸ ವರ್ಷಕ್ಕೆ ಸಿಹಿ ಹಂಚುವುದು ಪದ್ಧತಿ. ಆ ದೃಷ್ಟಿಯಿಂದ ಮಂಡ್ಯ ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಜೀವನೋಪಾಯ ವಿಷನ್, ಕೃಷಿ ಇಲಾಖೆ ಒಟ್ಟುಗೂಡಿ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳ ತಿನಿಸುಗಳು 100 ರು. ಒಳಗೆ ಸಾರ್ವಜನಿಕರಿಗೆ ಸೇರಬೇಕು ಎಂಬ ಯೋಚನೆಯಿಂದ ವಿಭಿನ್ನ ಪ್ರಯತ್ನ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಿರಿಧಾನ್ಯಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಹೇಳಿದರು.ಕೃಷಿ ಇಲಾಖೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತೆ (ನ್ಯೂಟ್ರಿ ಸಿರಿಧಾನ್ಯ) ಯೋಜನೆಯಡಿ ‘ಸಿರಿಧಾನ್ಯ ರೋಡ್ ಶೋ’ ಮೂಲಕ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಆಯೋಜಿಸಲಾಗಿದ್ದ ‘ಸಿರಿಧಾನ್ಯ ರೋಡ್ ಶೋ’ ಕಾರ್ಯಕ್ರಮಕ್ಕೆ ಹಸಿರು ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಹೆಣ್ಣು ಮಕ್ಕಳು ಸಿರಿಧಾನ್ಯಗಳನ್ನು ಬಳಸಿ ಆರೋಗ್ಯಕರ, ಪೌಷ್ಟಿಕತೆ ಹೆಚ್ಚಿಸುವ ಶುಚಿಯಾದ ರುಚಿಕರವಾದ ಅಡುಗೆ ತಯಾರಿಸಬಹುದು ಎಂಬ ಪ್ರಯತ್ನ ನಡೆಯುತ್ತಿದೆ. ಹೊಸ ವರ್ಷಕ್ಕೆ ಸಿಹಿ ಹಂಚುವುದು ಪದ್ಧತಿ. ಆ ದೃಷ್ಟಿಯಿಂದ ಮಂಡ್ಯ ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಜೀವನೋಪಾಯ ವಿಷನ್, ಕೃಷಿ ಇಲಾಖೆ ಒಟ್ಟುಗೂಡಿ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳ ತಿನಿಸುಗಳು 100 ರು. ಒಳಗೆ ಸಾರ್ವಜನಿಕರಿಗೆ ಸೇರಬೇಕು ಎಂಬ ಯೋಚನೆಯಿಂದ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದರು.ಸರ್ಕಾರಿ ಇಲಾಖೆಗಳೇ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಲು ಹೊರಟಿದೆ. ಇದರಿಂದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಹಾಯವಾಗಲಿದೆ. ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರು ಒಗ್ಗೂಡಿದಾಗ, ಸಾಧಕ ಬಾಧಕಗಳನ್ನು ಹಂಚಿಕೆ ಮಾಡಿದಾಗ ಮಾತ್ರ ಸಾವಯವ ಕೃಷಿಗೆ ಪ್ರೇರಣೆ ದೊರೆಯುತ್ತದೆ. ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ನೈಸರ್ಗಿಕ ಕೃಷಿ, ಕೃಷಿಕರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು ಎಂದರು.
ನೈಸರ್ಗಿಕ ಕೃಷಿಕರ ಅನುಭವವನ್ನು ಇತರ ಕೃಷಿಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಸಾವಯವ ಕೃಷಿಕರನ್ನು ಸೇರಿಸಿ ಕೃಷಿ ಸಖಿಯರಿಂದ ತರಬೇತಿ ನೀಡಲಾಗಿದೆ. ಇದರ ಮೂಲ ಉದ್ದೇಶ ಜಿಲ್ಲೆಯಲ್ಲಿ ಸುಮಾರು 4250 ಎಕರೆ ಪ್ರದೇಶವನ್ನು ನಾವು ಸಾವಯವ, ನೈಸರ್ಗಿಕ ಕೃಷಿ ಪದ್ಧತಿ ಅಡಿಯಲ್ಲಿ ತರುವ ಉದ್ದೇಶವಿದೆ. ಇಂದು ಸಣ್ಣ ಪ್ರಮಾಣದಲ್ಲಿ ಯೋಜನೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೃಹದಾಕಾರವಾಗಿ ಬೆಳೆಯಬೇಕು. ನೈಸರ್ಗಿಕ ಕೃಷಿ ಪದ್ಧತಿಯತ್ತ ಹೋದಾಗ ಮಾತ್ರ ನಾವು ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ನೀರು, ಫಲವತ್ತಾದ ಮಣ್ಣು ಎಲ್ಲರಿಗೂ ಸಿಗುವಂತದಲ್ಲ. ಜಿಲ್ಲೆಗೆ ದೊರೆತಿರುವ ನೀರು, ಮಣ್ಣು ದೈವದತ್ತವಾಗಿ ಸಿಕ್ಕಿರುವ ವರ. ಇವುಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕು. ನಮ್ಮ ಅಗತ್ಯಕ್ಕನುಗುಣವಾಗಿ ಸುಸ್ಥಿರ ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ದೇಶಕ್ಕೆ ಆಹಾರ ಭದ್ರತೆ ದೊರಕಿದರೂ ರೈತರಿಗೆ ಆದಾಯ ಭದ್ರತೆ ದೊರೆತಿಲ್ಲ. ರೈತರ ಆದಾಯ ಉತ್ಪಾದನೆಯ ನಂತರದ ಕೃಷಿಯಲ್ಲಿ ಅಡಗಿದೆ. ಕೃಷಿಕರು ಕೇವಲ ಉತ್ಪಾದನೆಗೆ ಸೀಮಿತವಾಗದೆ ಕೃಷಿಯನ್ನು ಉದ್ಯಮ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಪ್ರಥಮವಾಗಿ ರಾಜ್ಯದಲ್ಲಿ ಮಂಡ್ಯ ರೈತ ಉತ್ಪಾದಕ ಕಂಪನಿಗಳು 500-600 ಟನ್ ಭತ್ತವನ್ನು ಖರೀದಿ ಮಾಡಿ ‘ರೈತರ ನಡೆ ಮಾರಾಟದ ಕಡೆ’ ಎಂಬ ಘೋಷವಾಕ್ಯದ ಮುಖಾಂತರ ರೈತರಿಗೆ ಮಾರಾಟದ ಕಲೆಯನ್ನು ಕಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುನಿತಾ, ಪ್ರತಿಭಾ, ಹರ್ಷ, ಗಿರೀಶ್ ಗೌಡ ಹಾಗೂ ಮುಖಂಡರಾದ ಸೋಮಶೇಖರ್ ಗೌಡ, ಕಾರಸವಾಡಿ ಮಹದೇವ, ಮಹೇಶ್ ಚಂದ್ರಗುರು ಇತರರಿದ್ದರು.