ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಹಲವಾರು ದುಶ್ವಟಗಳಿಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಓದಿಸಿ ಮಕ್ಕಳು ದೊಡ್ಡಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಅಂತಹ ನಿಸ್ವಾರ್ಥ ಪೋಷಕರು ಇಂದು ಆತಂಕದಲ್ಲಿ ಬದುಕು ನಡೆಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನಮ್ಮ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು. ಪೋಷಕರು ಮಕ್ಕಳಿಗೆ ಉತ್ತಮವಾದ ಮಾರ್ಗದರ್ಶನ ನೀಡಬೇಕು ಎಂದು ಬೆಳಗಾವಿಯ ವಿಟಿಯು ಸಿಂಡಿಕೇಟ್ ಮಾಜಿ ಸದಸ್ಯ ಡಾ.ಎನ್.ಕೃಷ್ಣೇಗೌಡ ಅವರು ತಿಳಿಸಿದರು.

ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಚಿಣ್ಣರ ಪ್ರತಿಭಾ ರಂಗೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಹಲವಾರು ದುಶ್ವಟಗಳಿಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಓದಿಸಿ ಮಕ್ಕಳು ದೊಡ್ಡಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಅಂತಹ ನಿಸ್ವಾರ್ಥ ಪೋಷಕರು ಇಂದು ಆತಂಕದಲ್ಲಿ ಬದುಕು ನಡೆಸುವಂತಾಗಿದೆ. ಹಾಗಾಗಿ ಮಕ್ಕಳು ಪೋಷಕರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಓದಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಏನೂ ಇಲ್ಲದ ದಿನಗಳಲ್ಲಿ ನಾವುಗಳು ಓದಿ ಸಾಧನೆ ಮಾಡಿದ್ದೇವೆ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಎಲ್ಲವೂ ಇದೆ. ಇಡೀ ಪ್ರಪಂಚವನ್ನು ಕೈಬೆರಳಿನ ತುದಿಯಲ್ಲಿ ನೋಡುವ ಅವಕಾಶವಿದೆ. ಆದರೂ ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮಕ್ಕಳಿಗೆ ಎಲ್ಲವು ಕಣ್ಣಮುಂದಿದ್ದರೂ ಮಕ್ಕಳ ಕಣ್ಣು ಮಾತ್ರ ಮೊಬೈಲ್ ಮೇಲಿದೆ. ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಗಮನ ಸೆಳೆದ ರಂಗೋತ್ಸವ:

ಶಾಲಾ ಆವರಣದಲ್ಲಿ ನಡೆದ ಚಿಣ್ಣರ ಪ್ರತಿಭಾ ರಂಗೋತ್ಸವವು ಕಾರ‌್ಯಕ್ರಮವು ಎಲ್ಲರ ಗಮನ ಸೆಳೆಯಿತು. ಶಾಲೆ ಮುಂಭಾಗ ಹೂವಿನಲ್ಲ ಪಲ್ಲಕ್ಕಿಯಲ್ಲಿ ಶಾರದೆ ಫೋಟೋ ಇಟ್ಟು ಪೂಜೆಸಲ್ಲಿಸಿ ಅದನ್ನು ಯುವತಿಯರು ಪೂರ್ಣಕುಂಭದ ಮೆರವಣಿಗೆಯ ಮೂಲಕ ಶಾಲಾ ಆವರಣಕ್ಕೆ ಕರೆತರಲಾಯಿತು. ಭವ್ಯವಾಗಿ ನಿರ್ಮಿಸಿದ್ದ ವೇದಿಯಲ್ಲಿ ಶಾಲಾ ವಿದ್ಯಾರ್ಥಿಗಳು ಭಗವತ್ ಗೀತೆಯ ಶ್ಲೋಕ ಹೇಳುವ ಮೂಲಕ ಚಾಲನೆ ನೀಡಿದರು.

ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಪೂಜಾಕುಣಿತ, ಡೊಳ್ಳುಕುಣಿತ, ರಂಗಗುಣಿತ, ಜಾನಪದ ಗೀತೆಗಳು, ಕೋಲಾಟ ಸೇರಿದಂತೆ ವಿವಿಧ ವೇಷಭೂಷಣಗಳಲ್ಲಿ ಮಕ್ಕಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಬಳಿಕ ಶಾಲಾ ಆವರಣದಲ್ಲಿ ಆಹಾರ ಮೇಳೋತ್ಸವ, ಛಧ್ಮವೇಷೋತ್ಸವ ನಡೆಯಿತು. ಯಜಮಾನರಾದ ತಮ್ಮೇಗೌಡ, ಕೆ.ಜಯರಾಮು, ಪುಟ್ಟಸ್ವಾಮೀಗೌಡ, ಲೋಕೇಶ್, ಕೆ.ಕೆ.ಗೌಡಪ್ಪ ರಂಗೋತ್ಸವ ಉದ್ಘಾಟಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೈ.ಶಂಕರೇಗೌಡ, ಗುರುಪಾದಪ್ಪ, ಜಯರಾಮೇಗೌಡ, ಎಲ್.ಸಿ.ಚಂದ್ರು, ಎಸ್.ಲಕ್ಷ್ಮೇಗೌಡ, ಶಿವಲಿಂಗೇಗೌಡ, ಕನ್ಯಾಕುಮಾರ್, ರವಿ ಕೆ.ಎಸ್., ಕರೀಗೌಡ, ಚುಂಚೇಗೌಡ, ರಮೇಶ್.ಕೆ., ಎ.ಎಂ.ಕೃಷ್ಣೇಗೌಡ ಅವರನ್ನು ಅಭಿನಂಧಿಸಿದರು. ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆಯಲು ಕಾರಣರಾದ ಶಾಲೆ ಶಿಕ್ಷಕರು, ಸಿಬ್ಬಂದಿಗಳನ್ನು ಅಭಿನಂಧಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು, ಆಡಳಿತಾಧಿಕಾರಿ ಅಕ್ಷಯ್, ಪ್ರೊ.ಎಂ.ಪಂಚಲಿಂಗೇಗೌಡ ಸೇರಿದಂತೆ ಶಾಲೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.