ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ ಪ್ರಕರಣ: ಸ್ಥಳಕ್ಕೆ ಡಿಡಿ ಭೇಟಿ

| Published : Sep 18 2025, 01:10 AM IST

ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ ಪ್ರಕರಣ: ಸ್ಥಳಕ್ಕೆ ಡಿಡಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ಮಂಗಳವಾರ ಇಲ್ಲಿನ ಶಿಕ್ಷಕಿಯೊಬ್ಬರು ಥಳಿಸಿ ಗಾಯಗೊಳಿಸಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ್ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಲಕರು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರಿಗೆ ಘೇರಾವ್ ಹಾಕಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ಮಂಗಳವಾರ ಇಲ್ಲಿನ ಶಿಕ್ಷಕಿಯೊಬ್ಬರು ಥಳಿಸಿ ಗಾಯಗೊಳಿಸಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ್ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಲಕರು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರಿಗೆ ಘೇರಾವ್ ಹಾಕಿದರು.ಚಾಮಲಾಪುರ ಗ್ರಾಮದ ಶಿವಕುಮಾರ್ ಎಂಬುವರ ಪುತ್ರ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗುರುಪ್ರಸಾದ್ ಎಂಬ ವಿದ್ಯಾರ್ಥಿಗೆ ಶಿಕ್ಷಕಿ ಭಾನುಮತಿ ಈತನ ಗುದ, ತೊಡೆ, ಕೈ, ಹೊಟ್ಟೆಯ ಭಾಗಕ್ಕೆ ಥಳಿಸಿ ತೀವ್ರ ಗಾಯಗೊಳಿಸಿದ್ದರು. ಈತನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ್‌ ಮಾತನಾಡಿ, ಈ ಶಾಲೆಯ ಶಿಕ್ಷಕಿ ವಿದ್ಯಾರ್ಥಿಗೆ ಥಳಿಸಿರುವುದು ಸತ್ಯ. ಈಕೆಯನ್ನು ಶಾಲೆಯ ಆಡಳಿತ ಮಂಡಳಿ ವಜಾ ಮಾಡಬೇಕು. ಅಲ್ಲದೆ ಇವರನ್ನು ಇಲ್ಲಿನ ಆಡಳಿತ ಮಂಡಳಿಯವರು ನೇಮಿಸಿಕೊಳ್ಳಲು ನೇಮಕಾತಿ ಆದೇಶವನ್ನೇ ನೀಡಿಲ್ಲ. ಕೇವಲ ಒಂದು ರಿಜಿಸ್ಟ್ರಾರ್‌ನಲ್ಲಿ ನಮೂದಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಈ ಹಿಂದೆಯೂ ಹಲವು ವಿದ್ಯಾರ್ಥಿಗಳಿಗೆ ಥಳಿಸಿರುವ ಬಗ್ಗೆ ದೂರುಗಳಿವೆ. ಅಲ್ಲದೆ ಇಲ್ಲಿ ಸಿಸಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ಇದೆ. ಇಲ್ಲಿ ಶೌಚಗೃಹದ ವ್ಯವಸ್ಥೆಯೂ ಸರಿಯಾಗಿಲ್ಲ ಎಂಬುದರ ಬಗ್ಗೆ ದೂರಿ ಇದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿಗೆ ಈ ಶಿಕ್ಷಕಿಯನ್ನು ಶಾಲೆಯಿಂದ ವಜಾಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನಷ್ಟು ಮಾಹಿತಿ ಸಂಗ್ರಹಿಸಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.ಗ್ರಾಮಸ್ಥರು, ಪೋಷಕರಿಂದ ಘೇರಾವ್:

ಸ್ಥಳ ಮಹಜರು ನಡೆಸಲು ಪೊಲೀಸರೊಂದಿಗೆ ಬಂದ ಬಾಲಕನ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಘೇರಾವ್ ನಡೆಸಿದ ಘಟನೆಯೂ ಜರುಗಿತು. ಶಾಲೆಯಲ್ಲಿ ಮಕ್ಕಳನ್ನು ಥಳಿಸುವ ಅಧಿಕಾರವಿಲ್ಲ, ಮಾರಣಾಂತಿಕ ಹಲ್ಲೆ ಮಾಡುವಂತಿಲ್ಲ. ಮಗುವಿನ ಬೆನ್ನು ಹುರಿಗೆ ಆಗುವ ಗಾಯ ಅಲ್ಪದರಲ್ಲೇ ತಪ್ಪಿದೆ. ಈ ಶಾಲೆಯಲ್ಲಿ ಹಲವು ಲೋಪಗಳಿವೆ, ಸರ್ಕಾರದ ನೀತಿ ನಿಮಯಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಇಲ್ಲಿರುವ ಶಿಕ್ಷಕರ ವಿದ್ಯಾರ್ಹತೆಯ ಬಗ್ಗೆಯೂ ಅನುಮಾನವಿದೆ. ಇಲ್ಲಿ ಹಲವು ಸಮಸ್ಯೆಗಳಿವೆ. ಆಗಾಗ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ವಾಗ್ವಾದ ನಡೆಸಿದರು. ನಂತರ ಪೊಲೀಸರು ಬಂದ ವಾತಾವರಣವನ್ನು ತಿಳಿಗೊಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಬಿಆರ್‌ಸಿ ನಂಜುಂಡಯ್ಯ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಸಿದ್ದರಾಜು, ಮಂಗಳಮ್ಮ, ನಾಗರಾಜು ಇದ್ದರು.