ರಸ್ತೆ ಅಪಘಾತ ಪ್ರತ್ಯೇಕ ಪ್ರಕರಣದಲ್ಲಿ ಮೂವರು ಸಾವು

| Published : Sep 18 2025, 01:10 AM IST

ಸಾರಾಂಶ

ಬೆಳಗಿನ ಜಾವ ರಸ್ತೆಯಲ್ಲಿ ಕಬ್ಬು ತುಂಬಿಸಲು ನಿಂತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಎಳೆಪಿಳ್ಳಾರಿ ಬಳಿ ರಾಷ್ಟ್ರೀಯ ಹೆದ್ದಾರಿ ೯೪೮ರಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ, ಯಳಂದೂರು

ಬೆಳಗಿನ ಜಾವ ರಸ್ತೆಯಲ್ಲಿ ಕಬ್ಬು ತುಂಬಿಸಲು ನಿಂತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಎಳೆಪಿಳ್ಳಾರಿ ಬಳಿ ರಾಷ್ಟ್ರೀಯ ಹೆದ್ದಾರಿ ೯೪೮ರಲ್ಲಿ ಬುಧವಾರ ನಡೆದಿದೆ.

ಅಗ್ರಹಾರ ಗ್ರಾಮದ ನಿತಿನ್‌ಕುಮಾರ್ (೧೬) ಹಾಗೂ ಉಮ್ಮತ್ತೂರು ಗ್ರಾಮದ ಸುಮಂತ್(೨೨) ಮೃತ ದುರ್ದೈವಿಗಳು. ಇವರು ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಿಂದ ಟೊಮೇಟೊವನ್ನು ಗೂಡ್ಸ್ ಆಟೋದಲ್ಲಿ ತುಂಬಿಕೊಂಡು ಕೊಳ್ಳೇಗಾಲಕ್ಕೆ ಸಾಗಿಸುತ್ತಿದ್ದರು. ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಇವರ ಆಟೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಗುದ್ದಿದ ರಭಸಕ್ಕೆ ಆಟೋದ ಅರ್ಧ ಭಾಗ ಕಬ್ಬಿನ ಲಾರಿ ಒಳಗೆ ಸಿಲುಕಿಕೊಂಡಿದೆ. ಅಗರ ಮಾಂಬಳ್ಳಿ ಪೊಲೀಸರು ಇವರಿಬ್ಬರ ಕಳೇಬರ ಹೊರತರಲು ಹರಸಾಹಸ ಮಾಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಪ್ರಕರಣ ದಾಖಲಾಗಿದೆ .

ರಸ್ತೆ ಮಧ್ಯ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಮಗು ಸಾವುಕೊಳ್ಳೇಗಾಲ: ಕಬ್ಬು ತುಂಬಲು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಗು ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಚಿಲುಕವಾಡಿ ಗ್ರಾಮ ಸಮೀಪ ಬುಧವಾರ ನಡೆದಿದೆ.ತಾಲೂಕಿನ ಗುಂಡೇಗಾಲ ಗ್ರಾಮದ ಹರ್ಷಿತಾ (4) ಮೃತ ದುರ್ದೈವಿ. ಈಕೆಯ ಪಾಲಕರಾದ ನಂಜುಂಡಸ್ವಾಮಿ ಹಾಗೂ ಕಾವ್ಯ ಗಾಯಗೊಂಡಿದ್ದಾರೆ. ಈಕೆಯ ಪೋಷಕರು ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಮಂಗಳವಾರ ಗ್ರಾಮಕ್ಕೆ ಬಂದು ವಾಪಸ್‌ ಬುಧವಾರ ಬೆಳಗಿನ ಜಾವ ಮೈಸೂರಿಗೆ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಕಬ್ಬು ತುಂಬಲು ರಸ್ತೆಯ ಮಧ್ಯದಲ್ಲೆ ಟ್ರ್ಯಾಕ್ಟರ್ ವೊಂದು ನಿಂತಿತ್ತು. ಗುಂಡೇಗಾಲದಿಂದ ಬಂದ ಈಕೆಯ ಪಾಲಕರ ಬೈಕ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಮಗು, ತಂದೆ ತಾಯಿ ಗಾಯಗೊಂಡರು ಎನ್ನಲಾಗಿದೆ. ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಗು ಮೖತಪಟ್ಟಿದೆ. ಕಾವ್ಯ, ನಂಜುಂಡನಾಯಕ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಚಾಲಕ ಟ್ರ್ಯಾಕ್ಟರ್ ಸಮೇತ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಪರಾರಿಯಾದ ವಾಹನದ ಸಂಖ್ಯೆ, ಆರೋಪಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.