ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಕ್ಕಳ ಶೈಕ್ಷಣಿಕ ಪುರೋಭಿವೃದ್ಧಿಗೆ ಅಗತ್ಯವಾದ ಶಾಲಾ-ಕಾಲೇಜು, ಹಾಸ್ಟೆಲ್‍ಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಡುವುದು ಜನ ಪ್ರತಿನಿಧಿಗಳಾದ ನಮ್ಮ ಹೊಣೆಗಾರಿಕೆ. ಅದರಂತೆಯೇ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರ ಬೆಳವಣಿಗೆಯಲ್ಲಿ ಪಾಲುದಾರರಾಗುವುದು ಶಿಕ್ಷಕರ ಹೊಣೆಗಾರಿಕೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. 7.50 ಕೋಟಿ ರು. ಗಳನ್ನು ಕಾಲೇಜು ಹಾಸ್ಟೆಲ್‍ಗೆ ಕೊಟ್ಟಿದ್ದೇನೆ. ಮುಂದಿನ ವರ್ಷದಲ್ಲಿ ಎರಡು ಪ್ರಥಮ ದರ್ಜೆ ಕಾಲೇಜು ಹಾಸ್ಟೆಲ್‍ಗಳ ನಿರ್ಮಾಣಕ್ಕೆ ತಲಾ7.50 ಕೋಟಿ ರು. ಗಳನ್ನು ಮಂಜೂರು ಮಾಡಿ ಅತ್ಯುತ್ತಮ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ, ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್. ಶಶಿಕಲಾ, ಡಾ.ಹರೀಶ್ ಪಿ.ಎಸ್. ಮಮತಾ ಎನ್.ಆರ್. ಚಂದ್ರಕುಮಾರ್ ಎಸ್. ಡಾ.ಗಿರೀಶ್ ಟಿ.ಆರ್. ಮಸೂದ್ ಅಹಮದ್, ಕರಿಬಸಪ್ಪ ಎಂ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.